S Shorts

ಮತ್ತೆ ಶುರುವಾಯ್ತು ಮೇಕೆದಾಟು ಕ್ಯಾತೆ: ಮಾತುಕತೆಗೆ ರೆಡಿ ಎಂದ ಸಿಎಂ ಡಿಕೆಶಿ!

ಮತ್ತೆ ಶುರುವಾಯ್ತು ಮೇಕೆದಾಟು ಕ್ಯಾತೆ: ಮಾತುಕತೆಗೆ ರೆಡಿ ಎಂದ ಸಿಎಂ ಡಿಕೆಶಿ!
Author: Meghana Gowda
Posted By: Meghana Gowda
Updated: Jun 18, 2026 | 3:09 PM

ಬೆಂಗಳೂರು: ಮೇಕೆದಾಟು ಯೋಜನೆ (Mekedatu Project) ವಿಚಾರವಾಗಿ ನೆರೆರಾಜ್ಯ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದ್ದು, ಈ ಬಾರಿ ಸ್ವತಃ ಅಲ್ಲಿನ ರಾಜ್ಯಪಾಲರೇ (Governor) ಕರ್ನಾಟಕದ ವಿರುದ್ಧ ಹೇಳಿಕೆ ನೀಡಿದ್ದಾರೆ. ಮೇಕೆದಾಟು ಯೋಜನೆಯಿಂದ ತಮಿಳುನಾಡು ರೈತರಿಗೆ ಸಂಕಷ್ಟ ಎದುರಾಗಲಿದೆ ಎಂದು ವಿಧಾನಸಭೆಯಲ್ಲೇ (Assembly) ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹೇಳಿದ್ದಾರೆ. ಕಾವೇರಿ ನೀರು ಪಡೆಯುವುದು ತಮಿಳುನಾಡು ರೈತರ ಹಕ್ಕಾಗಿದ್ದು, ಯೋಜನೆ ತಡೆಯಲು ಅಲ್ಲಿನ ಸರ್ಕಾರ ಕಾನೂನು ಹೋರಾಟ (Legal Battle) ನಡೆಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಮತ್ತೊಂದೆಡೆ ತಮಿಳುನಾಡು ರಾಜ್ಯಪಾಲರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್​​ (CM D.K. Shivakumar), “ಈ ಬಗ್ಗೆ ತಮಿಳುನಾಡು ಸಿಎಂ ಜೊತೆ ಮಾತುಕತೆಗೆ ನಾನು ಸಿದ್ಧನಿದ್ದೇನೆ. ನಾವೆಲ್ಲರೂ ಭಾರತೀಯರು. ತಮಿಳುನಾಡಿಗೆ ಕೊಡಬೇಕಾದ ನೀರನ್ನು ನಾವು ಕೊಡುತ್ತೇವೆ. ನೀರನ್ನು ಮೊದಲು ಸಂಗ್ರಹ ಮಾಡಿಕೊಂಡು (Store) ಅವರಿಗೆ ನೀಡುತ್ತೇವೆ. ನಾವೂ ಬದುಕಬೇಕು, ಅವರೂ ಬದುಕಬೇಕು. ಹೀಗಾಗಿ ಆದೇಶದ ಪ್ರಕಾರ, ಅವರ ಅನುಕೂಲತೆ ಹಾಗೂ ನಮ್ಮ ಅನುಕೂಲತೆ ನೋಡಿಕೊಂಡು ನೀರು ನೀಡುತ್ತೇವೆ. ನಾವು ನಟ, ರಾಜಕಾರಣಿ ವಿಜಯ್​ಗೆ ಏನು ಮನವಿ ಮಾಡಬೇಕೋ ಮಾಡುತ್ತೇವೆ, ಇದರಲ್ಲಿ ರಾಜಕಾರಣ ಏನೂ ಇಲ್ಲ” ಎಂದಿದ್ದಾರೆ.

 ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಯೋಜನೆಗೆ ತಡೆ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) 2025 ರ ನವೆಂಬರ್​​ನಲ್ಲಿ ವಜಾಗೊಳಿಸಿತ್ತು (Dismissed). ಈ ತೀರ್ಪನ್ನು ಮರುಪರಿಶೀಲನೆ (Review Petition) ಮಾಡಬೇಕೆಂದು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನೂ ಕೂಡ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (Chief Justice) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ ಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠ ಇತ್ತೀಚೆಗಷ್ಟೇ ವಜಾ ಮಾಡಿ ಆದೇಶ ಹೊರಡಿಸಿತ್ತು. “ಮರು ಪರಿಶೀಲನಾ ಅರ್ಜಿಯ ವಿಷಯಗಳು ಮತ್ತು ದಾಖಲೆಗಳನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ (Examined), ತೀರ್ಪಿನ ಪುನರ್ ಪರಿಶೀಲನೆ ಅಗತ್ಯ ಇಲ್ಲ” ಎಂದು ಪೀಠ ಸ್ಪಷ್ಟಪಡಿಸಿತ್ತು. ಆದರೂ ತಮಿಳುನಾಡು ಮತ್ತೆ ರಾಜಕೀಯವಾಗಿ ಮೇಕೆದಾಟು ವಿವಾದವನ್ನು ಕೆದಕುತ್ತಿದೆ.