S Shorts

Melukote Vairamudi | ಮೇಲುಕೋಟೆಯಲ್ಲಿ ಇಂದು ವೈರಮುಡಿ ವೈಭವ: ರತ್ನಖಚಿತ ಕಿರೀಟಧಾರಿ ಚೆಲುವನಾರಾಯಣನ ದರ್ಶನಕ್ಕೆ ಕ್ಷಣಗಣನೆ!

Melukote Vairamudi | ಮೇಲುಕೋಟೆಯಲ್ಲಿ ಇಂದು ವೈರಮುಡಿ ವೈಭವ: ರತ್ನಖಚಿತ ಕಿರೀಟಧಾರಿ ಚೆಲುವನಾರಾಯಣನ ದರ್ಶನಕ್ಕೆ ಕ್ಷಣಗಣನೆ!
Author: Meghana Gowda
Posted By: Meghana Gowda
Updated: Mar 28, 2026 | 9:40 AM

ಮೇಲುಕೋಟೆ: ದಕ್ಷಿಣ ಬದರಿ ಎಂದೇ ಖ್ಯಾತಿಯಾಗಿರುವ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಇಂದು ಪ್ರಸಿದ್ಧ ‘ವೈರಮುಡಿ ಬ್ರಹ್ಮೋತ್ಸವ’ ( Melukote Vairamudi Brahmotsava) ಅದ್ಧೂರಿಯಾಗಿ ಜರುಗಲಿದೆ. ಮಂಡ್ಯದ ಜಿಲ್ಲಾ ಖಜಾನೆಯಿಂದ ಬಿಗಿ ಭದ್ರತೆಯೊಂದಿಗೆ ತರಲಾಗುವ ರತ್ನಖಚಿತ ವೈರಮುಡಿ ಕಿರೀಟವನ್ನು ಇಂದು ರಾತ್ರಿ ಭಗವಾನ್ ಚೆಲುವನಾರಾಯಣ ಸ್ವಾಮಿಗೆ ಧಾರಣೆ ಮಾಡಲಾಗುವುದು. ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.

ಇಂದು ರಾತ್ರಿ 8 ಗಂಟೆಗೆ ಸರಿಯಾಗಿ ಸ್ವಾಮಿಗೆ ವೈರಮುಡಿ ಕಿರೀಟ ಧಾರಣೆ ಮಾಡಲಾಗುವುದು. ಬಳಿಕ ಕಿರೀಟಧಾರಿ ಚೆಲುವನಾರಾಯಣನ ಭವ್ಯ ಉತ್ಸವವು ಮುಂಜಾನೆಯವರೆಗೂ ಸಾಗಲಿದೆ. ಬೆಳಿಗ್ಗೆಯೇ ಮಂಡ್ಯದ ಜಿಲ್ಲಾ ಖಜಾನೆಯಿಂದ ರಾಜಮುಡಿ ಮತ್ತು ವೈರಮುಡಿ ಸೇರಿದಂತೆ ವಿವಿಧ ಆಭರಣಗಳನ್ನು ಬಿಗಿ ಪೊಲೀಸ್ ಕಾವಲಿನಲ್ಲಿ ಮೇಲುಕೋಟೆಗೆ ತರಲಾಗಿದೆ. ದೇವಸ್ಥಾನದ ಆವರಣದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ಹಾಗೂ ಮನಮೋಹಕ ಹೂವಿನ ಅಲಂಕಾರ ಮಾಡಲಾಗಿದ್ದು, ಇಡೀ ಕ್ಷೇತ್ರ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ.

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಭಕ್ತರ ಅನುಕೂಲಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇಬ್ಬರು ಎಎಸ್‌ಪಿ, 6 ಡಿವೈಎಸ್‌ಪಿ ಸೇರಿದಂತೆ ಒಟ್ಟು 1,210 ಪೊಲೀಸ್ ಸಿಬ್ಬಂದಿ ಹಾಗೂ ಹೋಂಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ 40ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ವಿವಿಧ ಭಾಗಗಳಿಂದ ಸುಮಾರು 150ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ವಾಹನ ಪಾರ್ಕಿಂಗ್‌ಗೆ ಸೂಕ್ತ ಸ್ಥಳ ನಿಗದಿಪಡಿಸಲಾಗಿದೆ. ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತರಿಗೂ ನಿರಂತರ ಅನ್ನದಾಸೋಹ, ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.