ಬೆಳಗಾವಿ: ಖಾನಾಪುರ ತಾಲೂಕಿನ ಶಿರೋಲಿ ಗ್ರಾಮ ಪಂಚಾಯತಿಗೆ ಮಂಜೂರಾದ ಅಭಿವೃದ್ಧಿ ಅನುದಾನದಲ್ಲಿ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರ ಆಪ್ತ ಸಹಾಯಕ (PA) ಗುರುರಾಜ ಚರಕಿ ಅವರು ಶೇ.25 ರಷ್ಟು ಕಮಿಷನ್ (Commission) ಕೇಳಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಾಲೂಕಿನಾದ್ಯಂತ ಭಾರಿ ಸಂಚಲನ ಮೂಡಿಸಿದೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಸ್ಫೋಟಕ ಮಾಹಿತಿ ಹೊರಹಾಕಿದ ಶಿರೋಲಿ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಾ ಗುರವ, ಶಾಸಕರ ಪಿಎ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ಪಂಚಾಯಿತಿಗೆ 15ನೇ ಹಣಕಾಸು ಯೋಜನೆಯಡಿ 20 ಲಕ್ಷ ರೂ. ಹೆಚ್ಚುವರಿ ಅನುದಾನ ಮಂಜೂರು ಮಾಡಿಸಿದ್ದಕ್ಕಾಗಿ, ಶಾಸಕರ ಪಿಎ ಗುರುರಾಜ ಚರಕಿ ಅವರು ತಮಗೆ 5 ಲಕ್ಷ ರೂ. (ಶೇ.25 ರಷ್ಟು) ಕಮಿಷನ್ ನೀಡುವಂತೆ ಪಟ್ಟು ಹಿಡಿದಿದ್ದಾರೆ” ಎಂದು ಆರೋಪಿಸಿ, ಇದಕ್ಕೆ ಪೂರಕವಾದ 2 ನಿಮಿಷ 22 ಸೆಕೆಂಡ್‌ಗಳ ಮೊಬೈಲ್ ಸಂಭಾಷಣೆಯ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಆಡಿಯೋದಲ್ಲೇನಿದೆ?:
ವೈರಲ್ ಆಗಿರುವ ಆಡಿಯೋದಲ್ಲಿ ಪಿಎ ಗುರುರಾಜ ಚರಕಿ ಮಾತನಾಡಿದ್ದಾರೆ ಎನ್ನಲಾಗಿದ್ದು, “ಅನುದಾನ ಮಂಜೂರು ಮಾಡಿಸಲು ನಾನು ಸಾಲ ಮಾಡಿ ಬಡ್ಡಿ ಕಟ್ಟಿದ್ದೇನೆ. ಒಟ್ಟು ಮೊತ್ತದಲ್ಲಿ ಶೇ.10 ರಷ್ಟು ನನಗೆ ಹಾಗೂ ಉಳಿದ ಹಣವನ್ನು ಇತರರಿಗೆ ನೀಡಬೇಕಿದೆ. ಕಾಮಗಾರಿಯ ಸಾಮಗ್ರಿ ಖರೀದಿಯಲ್ಲಿ (Material Purchase) ಹೆಚ್ಚಿನ ಬಿಲ್ ತೋರಿಸಿ ಹಣ ಅಡ್ಜಸ್ಟ್ ಮಾಡಿಕೊಳ್ಳಿ” ಎಂದು ಸಲಹೆ ನೀಡಿರುವುದು ದಾಖಲಾಗಿದೆ. ಈ ಆರೋಪಕ್ಕೆ ಶಿರೋಲಿ ಗ್ರಾಪಂ ಅಧ್ಯಕ್ಷೆ ನೀಲಮ್ ವಿಜಯ ಮಾದಾರ ಕೂಡ ಸಾಕ್ಷಿ ನುಡಿದಿದ್ದಾರೆ.
ಶಾಸಕರ ಪ್ರತಿಕ್ರಿಯೆ ಏನು?:
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ವಿಠ್ಠಲ ಹಲಗೇಕರ, “ಕಳೆದ ಎರಡೂವರೆ ವರ್ಷದಿಂದ ಗುರುರಾಜ ನನ್ನ ಪಿಎ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಕಮಿಷನ್ ಕೇಳಿರುವ ಬಗ್ಗೆ ನನಗೇನೂ ತಿಳಿದಿಲ್ಲ. ಇದು ಅವರಿಬ್ಬರ ನಡುವಿನ ವೈಯಕ್ತಿಕ ವಿಚಾರವಾಗಿದ್ದು, ಇದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತ ಆರೋಪ ಎದುರಿಸುತ್ತಿರುವ ಪಿಎ ಗುರುರಾಜ, “ಶೀಘ್ರದಲ್ಲೇ ಸತ್ಯಾಂಶ ಹೊರಬರಲಿದೆ” ಎಂದು ಹೇಳುವ ಮೂಲಕ ಗುಮಾನಿ ಹೆಚ್ಚಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಸುರೇಶ ಜಾಧವ ಆಕ್ರೋಶ ವ್ಯಕ್ತಪಡಿಸಿದ್ದು, “ಜವಾಬ್ದಾರಿಯುತ ಸ್ಥಾನದಲ್ಲಿರುವ ಸರ್ಕಾರಿ ನೌಕರರು ಹೀಗೆ ಬಹಿರಂಗವಾಗಿ ಲಂಚಕ್ಕೆ ಬೇಡಿಕೆ ಇಡುವುದು ಅಕ್ಷಮ್ಯ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು” ಎಂದು ಆಗ್ರಹಿಸಿದ್ದಾರೆ.
