S Shorts

ಮದರ್ ಪ್ರಾಮಿಸ್ ಟ್ರೈಲರ್ ಬಿಡುಗಡೆ: ಸಿನಿಪ್ರಿಯರ ನಿರೀಕ್ಷೆ ಹೆಚ್ಚಿಸಿದ ಡಾಲಿ

ಮದರ್ ಪ್ರಾಮಿಸ್ ಟ್ರೈಲರ್ ಬಿಡುಗಡೆ: ಸಿನಿಪ್ರಿಯರ ನಿರೀಕ್ಷೆ ಹೆಚ್ಚಿಸಿದ ಡಾಲಿ
Author: Meghana Gowda
Posted By: Meghana Gowda
Updated: Jun 26, 2026 | 1:23 PM

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಮತ್ತು ನಿರ್ಮಾಪಕ ಡಾಲಿ ಧನಂಜಯ್ (Daali Dhananjay) ಅವರ ಬಹುನಿರೀಕ್ಷಿತ ‘ಮದರ್ ಪ್ರಾಮಿಸ್’ (Mother Promise) ಸಿನಿಮಾದ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳ ಮೂಲಕ ಸದ್ದು ಮಾಡಿದ್ದ ಈ ಚಿತ್ರ, ಈಗ ಬಿಡುಗಡೆಯಾಗಿರುವ ಭರ್ಜರಿ ಟ್ರೈಲರ್ ಮೂಲಕ ಸಿನಿಪ್ರಿಯರಲ್ಲಿ ಚಿತ್ರದ ಮೇಲಿನ ಕುತೂಹಲ ಮತ್ತು ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

‘ಡಾಲಿ ಪಿಕ್ಚರ್ಸ್’ (Daali Pictures) ಬ್ಯಾನರ್ ಅಡಿಯಲ್ಲಿ ಅತ್ಯಂತ ವಿಶಿಷ್ಟವಾಗಿ ಮೂಡಿಬಂದಿರುವ ಈ ಟ್ರೈಲರ್‌ನಲ್ಲಿ ಗೆಳೆತನದ ಸವಿ, ಭೂಗತ ಜಗತ್ತಿನ ಡಾನ್ ಗ್ಯಾಂಗ್‌ಗಳ ಆರ್ಭಟ, ಕ್ರಿಕೆಟ್ ಬೆಟ್ಟಿಂಗ್ ಹಾವಳಿ ಹಾಗೂ ತಾಯಿಯ ಭಾವುಕ ಸೆಂಟಿಮೆಂಟ್‌ಗಳ ಅದ್ಭುತ ಮಿಶ್ರಣ ಕಾಣಿಸಿದೆ. ಆ್ಯಕ್ಷನ್ ಮತ್ತು ಥ್ರಿಲ್ಲರ್ ಎಲಿಮೆಂಟ್‌ಗಳು ಸಿನಿಪ್ರಿಯರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಚಿತ್ರದಲ್ಲಿ ಡಾಲಿ ಧನಂಜಯ್ ಅವರು ಪ್ರಮುಖ ಪಾತ್ರದಲ್ಲಿ ಅಬ್ಬರಿಸಿದ್ದಾರೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಧನಂಜಯ್ ಅವರ ಆಪ್ತ ಸ್ನೇಹಿತರೆಲ್ಲರೂ ಒಟ್ಟಾಗಿ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಧನಂಜಯ್ ಅವರ ಸ್ನೇಹಿತ ಪೂರ್ಣ ಮೈಸೂರು ಈ ಚಿತ್ರವನ್ನು ನಿರ್ದೇಶಿಸಿದ್ದು, ಮತ್ತೊಬ್ಬ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ಅವರು ನಿರ್ಮಾಪಕರಾಗಿ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಡಾಲಿ ಪಿಕ್ಚರ್ಸ್ ಸಹಯೋಗದಲ್ಲಿ ಸಿನಿಮಾ ಅತ್ಯಂತ ಅದ್ಧೂರಿಯಾಗಿ ಮೂಡಿಬಂದಿದೆ.

ಬಹುತೇಕ ಹೊಸ ಕಲಾವಿದರಿಗೆ ವೇದಿಕೆ ಕಲ್ಪಿಸಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್ ಜೊತೆಗೆ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ನಾಗಭೂಷಣ್, ಹಿರಿಯ ನಟಿಯರಾದ ವಿನಯ ಪ್ರಸಾದ್, ಗೀತಾ ಹಾಗೂ ಹಿರಿಯ ನಟ ಗುರುದತ್ ಸೇರಿದಂತೆ ಹಲವು ಮುಖ್ಯ ತಾರೆಯರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟ್ರೈಲರ್‌ನಿಂದಲೇ ಸಖತ್ ಹವಾ ಸೃಷ್ಟಿಸಿರುವ ‘ಮದರ್ ಪ್ರಾಮಿಸ್’ ಶೀಘ್ರದಲ್ಲೇ ಬೆಳ್ಳಿಪರದೆಗೆ ಬರಲು ಸಜ್ಜಾಗಿದೆ.