S Shorts

Bollywoodನಿಂದ ದೊಡ್ಡ ನಂಬಿಕೆ ದ್ರೋಹ: ‘ಸನ್ ಆಫ್ ಸರ್ದಾರ್ 2’ ಚಿತ್ರತಂಡದ ವಿರುದ್ಧ ಮೃಣಾಲ್ ಠಾಕೂರ್ ಬೇಸರ!

Bollywoodನಿಂದ ದೊಡ್ಡ ನಂಬಿಕೆ ದ್ರೋಹ: ‘ಸನ್ ಆಫ್ ಸರ್ದಾರ್ 2’ ಚಿತ್ರತಂಡದ ವಿರುದ್ಧ ಮೃಣಾಲ್ ಠಾಕೂರ್ ಬೇಸರ!
Author: Sagaradventure
Posted By: Sagaradventure
Updated: Apr 16, 2026 | 3:27 PM

ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚುತ್ತಿರುವ ಹಾಗೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸತತ ಹಿಟ್ ನೀಡುತ್ತಿರುವ ನಟಿ ಮೃಣಾಲ್ ಠಾಕೂರ್ ಅವರಿಗೆ ಬಾಲಿವುಡ್ ಮೇಲೆ ತೀವ್ರ ಬೇಸರ ಮೂಡಿದೆ. ಮೂಲತಃ ಹಿಂದಿ ಚಿತ್ರರಂಗದಿಂದಲೇ ತಮ್ಮ ನಟನಾ ಪಯಣ ಆರಂಭಿಸಿದ್ದರೂ, ಇದೀಗ ಬಾಲಿವುಡ್‌ನ ಸಿನಿಮಾ ತಂಡವೊಂದು ತಮಗೆ ದೊಡ್ಡ ನಂಬಿಕೆ ದ್ರೋಹ ಮಾಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಜಯ್ ದೇವಗನ್ ನಟನೆಯ ‘ಸನ್ ಆಫ್ ಸರ್ದಾರ್ 2’ ಸಿನಿಮಾದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಮೃಣಾಲ್ ಮುಕ್ತವಾಗಿ ಮಾತನಾಡಿದ್ದಾರೆ.

‘ಸನ್ ಆಫ್ ಸರ್ದಾರ್ 2’ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಅವರು ರಾಬಿಯಾ ಅಖ್ತರ್ ಎಂಬ ಪಾತ್ರವನ್ನು ನಿರ್ವಹಿಸಿದ್ದು, ಅವರ ಪತಿಯಾಗಿ (ಡ್ಯಾನಿಶ್ ಪಾತ್ರ) ಹಿರಿಯ ನಟ ಚಂಕಿ ಪಾಂಡೆ ನಟಿಸಿದ್ದಾರೆ. ಆದರೆ, ಚಿತ್ರಕ್ಕೆ ಸಹಿ ಮಾಡುವಾಗ ಅಥವಾ ಚಿತ್ರೀಕರಣದ ಆರಂಭದಲ್ಲಿ ತಮ್ಮ ಪತಿಯ ಪಾತ್ರವನ್ನು ಇಷ್ಟು ಹಿರಿಯ ನಟ ಮಾಡುತ್ತಿದ್ದಾರೆ ಎಂಬ ವಿಚಾರವನ್ನು ಚಿತ್ರತಂಡ ಮರೆಮಾಚಿತ್ತು ಎಂದು ಮೃಣಾಲ್ ಆರೋಪಿಸಿದ್ದಾರೆ. ‘ನನ್ನ ಪತಿಯ ಪಾತ್ರದಲ್ಲಿ ಹಿರಿಯ ನಟರೊಬ್ಬರು ಕಾಣಿಸಿಕೊಳ್ಳುತ್ತಾರೆ ಎಂಬುದು ನನಗೆ ಮೊದಲೇ ತಿಳಿದಿರಲಿಲ್ಲ. ಈ ಒಂದು ನಿರ್ಧಾರ ನನ್ನ ಪಾತ್ರದ ಗತಿಯನ್ನೇ ಸಂಪೂರ್ಣವಾಗಿ ಬದಲಿಸಿತು. ಇದರಿಂದಾಗಿ ಚಿತ್ರತಂಡದ ಮೇಲಿದ್ದ ನನ್ನ ನಂಬಿಕೆ ಅಲುಗಾಡಿತು. ಆದರೂ ಇದೊಂದು ಪಾಠವಾಗಿದೆ, ಇದರ ಬಗ್ಗೆ ಯಾವುದೇ ವಿಷಾದವಿಲ್ಲ’ ಎಂದು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೇವಲ ಪಾತ್ರವರ್ಗದ ಆಯ್ಕೆ ವಿಚಾರದಲ್ಲಿ ಮಾತ್ರವಲ್ಲದೆ, ಚಿತ್ರದ ಎಡಿಟಿಂಗ್ ಹಂತದಲ್ಲೂ ತಮಗೆ ಅನ್ಯಾಯವಾಗಿದೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿನ ತಮ್ಮ ಕೆಲವು ಪ್ರಮುಖ ಭಾವನಾತ್ಮಕ ದೃಶ್ಯಗಳನ್ನು ಕತ್ತರಿಸಿ ತೆಗೆದುಹಾಕಲಾಗಿದೆ. ವಿಶೇಷವಾಗಿ ಚಿತ್ರದಲ್ಲಿ ತಮ್ಮ ಮಗಳಾಗಿ ನಟಿಸಿರುವ ರೋಶ್ನಿ ವಾಲಿಯಾ ಅವರೊಂದಿಗಿನ ತಾಯಿ-ಮಗಳ ಬಾಂಧವ್ಯದ ಅದ್ಭುತ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ‘ತಾನು ಜನ್ಮ ನೀಡದಿದ್ದರೂ ಮಗುವನ್ನು ಹೇಗೆ ಪ್ರೀತಿಸುತ್ತೇನೆ ಎಂಬುದನ್ನು ತೋರಿಸುವ ಪ್ರಮುಖ ಭಾವನಾತ್ಮಕ ಅಂಶವೇ ಈ ಚಿತ್ರದಲ್ಲಿ ಮಿಸ್ ಆಗಿದೆ’ ಎಂದು ಅವರು ಕಿಡಿಕಾರಿದ್ದಾರೆ.

ಅಜಯ್ ದೇವಗನ್, ನೀರು ಬಾಜ್ವಾ, ರವಿ ಕಿಶನ್ (ಸಂಜಯ್ ದತ್ ಬದಲಿಗೆ) ಮತ್ತು ಸಂಜಯ್ ಮಿಶ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಸನ್ ಆಫ್ ಸರ್ದಾರ್ 2’ ಚಿತ್ರವು ಕಳೆದ ವರ್ಷ ಆಗಸ್ಟ್ 1 ರಂದು ಬಿಡುಗಡೆಯಾಗಿ, ಬಾಕ್ಸ್ ಆಫೀಸ್‌ನಲ್ಲಿ ಸುಮಾರು 32 ಕೋಟಿ ರೂ. ಗಳ ಸಾಧಾರಣ ಕಲೆಕ್ಷನ್ ಮಾಡಿತ್ತು. ಸದ್ಯ ಮೃಣಾಲ್ ಠಾಕೂರ್ ಅವರು ತೆಲುಗು ನಟ ಅಡಿವಿ ಶೇಷ್ ಜೊತೆ ನಟಿಸಿರುವ ‘ಡಕಾಯ್ತ್’ ಸಿನಿಮಾ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದರ ಜೊತೆಗೆ ವರುಣ್ ಧವನ್ ಅಭಿನಯದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಹಾಗೂ ‘ಪೂಜಾ ಮೇರಿ ಜಾನ್’ ಚಿತ್ರಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ.