S Shorts

Nelamangala | ನಾದಿನಿ ಮಕ್ಕಳನ್ನ ನೋಡಿಕೊಳ್ಳುವ ವಿಚಾರಕ್ಕೆ ಪತಿ-ಪತ್ನಿಯರ ನಡುವೆ ಜಗಳ; ಸಾವಿನಲ್ಲಿ ಅಂತ್ಯ

Nelamangala | ನಾದಿನಿ ಮಕ್ಕಳನ್ನ ನೋಡಿಕೊಳ್ಳುವ ವಿಚಾರಕ್ಕೆ ಪತಿ-ಪತ್ನಿಯರ ನಡುವೆ ಜಗಳ; ಸಾವಿನಲ್ಲಿ ಅಂತ್ಯ
Author: Meghana Gowda
Posted By: Meghana Gowda
Updated: Apr 15, 2026 | 12:07 PM

ನೆಲಮಂಗಲ: ನಾದಿನಿ ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ದಂಪತಿ ನಡುವೆ ನಡೆದ ಸಣ್ಣ ಕಿತ್ತಾಟವೊಂದು ಗೃಹಿಣಿಯ ಆತ್ಮಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಮೊಟಗಾನಹಳ್ಳಿಯಲ್ಲಿ ಸಂಭವಿಸಿದೆ. ಜೀವನದಲ್ಲಿ ಜಿಗುಪ್ಸೆಗೊಂಡ ಜೀವಿತಾ(26) ಎಂಬಾಕೆ ಫ್ಯಾನಿಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಆದರೆ, ಇದೊಂದು ಕೊಲೆ ಎಂದು ಮೃತಳ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.

ಜೀವಿತಾ (Jeevitha) ಮತ್ತು ವಿನಯ್ ದಂಪತಿಗೆ ಎರಡು ವರ್ಷದ ಮಗು ಇದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ವಿನಯ್ ತಂಗಿ (ನಾದಿನಿ) ತೇಜಸ್ವಿನಿಯ ಇಬ್ಬರು ಮಕ್ಕಳು ಇವರ ಮನೆಗೆ ಬಂದಿದ್ದರು. ತನ್ನ ಮಗುವಿನ ಜೊತೆಗೆ ನಾದಿನಿ ಮಕ್ಕಳನ್ನೂ ಉಪಚರಿಸುವುದು ಕಷ್ಟ ಎಂದು ಜೀವಿತಾ ಪತಿಯ ಬಳಿ ಹೇಳಿಕೊಂಡಿದ್ದರು. ಇದೇ ವಿಷಯವಾಗಿ ಪತಿ-ಪತ್ನಿ ನಡುವೆ ಭಾರಿ ಗಲಾಟೆ ನಡೆದಿದೆ ಎನ್ನಲಾಗಿದೆ. ಇದರಿಂದ ಮನನೊಂದ ಜೀವಿತಾ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾರೆ.

ತನಿಖೆಯ ವೇಳೆ ವಿನಯ್ ಕುರಿತು ಆಘಾತಕಾರಿ ಸತ್ಯ ಬಯಲಾಗಿದೆ. ವಿನಯ್ ಈ ಹಿಂದೆ ಮೊದಲ ಮದುವೆಯಾಗಿದ್ದರೂ, ಆ ವಿಷಯವನ್ನು ಮುಚ್ಚಿಟ್ಟು ಜೀವಿತಾ ಜೊತೆ ಎರಡನೇ ಮದುವೆಯಾಗಿದ್ದ ಎನ್ನಲಾಗಿದೆ. ಈತನ ಕಿರುಕುಳ ತಾಳಲಾರದೆ ಮೊದಲ ಪತ್ನಿ ಈ ಮೊದಲೇ ದೂರವಾಗಿದ್ದರು ಎನ್ನಲಾಗಿದೆ. ಈಗ ಎರಡನೇ ಪತ್ನಿಯೂ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜೀವಿತಾ ನೇಣು ಹಾಕಿಕೊಳ್ಳುವಾಗ ಪತಿ ಮನೆಯಲ್ಲೇ ಇದ್ದರೂ ಆಕೆಯನ್ನು ಕಾಪಾಡಿಲ್ಲ. ಇದು ಆತ್ಮಹತ್ಯೆಯಲ್ಲ(Suicide) , ಬದಲಿಗೆ ವ್ಯವಸ್ಥಿತ ಕೊಲೆ ಎಂದು ಜೀವಿತಾ ಪೋಷಕರು ಆರೋಪಿಸಿದ್ದಾರೆ. ಸದ್ಯ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿನಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.