S Shorts

ಹಿಮ ಪರ್ವತದತ್ತ ‘ಒಂಟಿ ಪೆಂಗ್ವಿನ್’ ಪಯಣ: ಸಾಮಾಜಿಕ ಜಾಲತಾಣದಲ್ಲಿ ‘ಪೆಂಗ್ವಿನ್’ ಹವಾ!

ಹಿಮ ಪರ್ವತದತ್ತ ‘ಒಂಟಿ ಪೆಂಗ್ವಿನ್’ ಪಯಣ: ಸಾಮಾಜಿಕ ಜಾಲತಾಣದಲ್ಲಿ ‘ಪೆಂಗ್ವಿನ್’ ಹವಾ!
Author: Rashmi Yadav
Posted By: Rashmi Yadav
Updated: Jan 24, 2026 | 10:34 AM

ಜಗತ್ತು ಡಿಜಿಟಲ್ ಮಯವಾದಂತೆ ದಿನಕ್ಕೊಂದು ಸುದ್ದಿಗಳು ವೈರಲ್ ಆಗುವುದು ಸಾಮಾನ್ಯ. ಆದರೆ, ಸದ್ಯ ಇಂಟರ್ನೆಟ್ ಲೋಕದಲ್ಲಿ ಸದ್ದು ಮಾಡುತ್ತಿರುವುದು ಒಂದು ಪುಟ್ಟ ಪೆಂಗ್ವಿನ್. ತನ್ನ ಗುಂಪನ್ನು ಬಿಟ್ಟು ಏಕಾಂಗಿಯಾಗಿ ಹಿಮ ಪರ್ವತಗಳತ್ತ ಸಾಗುತ್ತಿರುವ ಈ ಪೆಂಗ್ವಿನ್ ಅನ್ನು ನೆಟ್ಟಿಗರು ‘ನಿಹಿಲಿಸ್ಟ್ ಪೆಂಗ್ವಿನ್’ (Nihilist Penguin) ಎಂದು ಕರೆಯುತ್ತಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋ ತುಣುಕಿನಲ್ಲಿ, ನೂರಾರು ಪೆಂಗ್ವಿನ್‌ಗಳು ಆಹಾರವನ್ನು ಅರಸುತ್ತಾ ಹೆಜ್ಜೆ ಹಾಕುತ್ತಿದ್ದರೆ, ಒಂದು ಪೆಂಗ್ವಿನ್ ಮಾತ್ರ ಇದ್ದಕ್ಕಿದ್ದಂತೆ ನಿಂತು ದಾರಿ ಬದಲಿಸುತ್ತದೆ. ತನಗೆ ಆಹಾರ ಸಿಗುವ ಸಮುದ್ರದ ದಿಕ್ಕನ್ನು ಬಿಟ್ಟು, ನೂರಾರು ಕಿಲೋಮೀಟರ್ ದೂರವಿರುವ ಬೆಳ್ಳಗಿನ ಹಿಮ ಪರ್ವತಗಳ ಕಡೆಗೆ ಅದು ಏಕಾಂಗಿಯಾಗಿ ಸಾಗಲು ಆರಂಭಿಸುತ್ತದೆ. ಆ ಪರ್ವತದ ಕಡೆಗೆ ಹೋದರೆ ಸಾವು ನಿಶ್ಚಿತ ಎಂದು ತಿಳಿದಿದ್ದರೂ ಅದು ತನ್ನ ಹಠ ಬಿಡುವುದಿಲ್ಲ.

ಈ ದೃಶ್ಯವು ಇತ್ತೀಚಿನದ್ದಲ್ಲ. ಇದು 2007ರಲ್ಲಿ ಬಿಡುಗಡೆಯಾದ ಪ್ರಸಿದ್ಧ ನಿರ್ದೇಶಕ ವರ್ನರ್ ಹರ್ಜೋಗ್ ಅವರ ‘ಎನ್‌ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್’ ಎಂಬ ಸಾಕ್ಷ್ಯಚಿತ್ರದ ಒಂದು ಭಾಗ. ಸುಮಾರು 19 ವರ್ಷಗಳ ನಂತರ 2026ರಲ್ಲಿ ಈ ವಿಡಿಯೋ ಮತ್ತೆ ಮುನ್ನೆಲೆಗೆ ಬಂದಿದ್ದು, ಇಂದಿನ ಯುವ ಪೀಳಿಗೆಯ ಮಾನಸಿಕ ಸ್ಥಿತಿಗೆ (Existential crisis) ಕನ್ನಡಿ ಹಿಡಿಯುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅಂದಹಾಗೆ ಈ ಪೆಂಗ್ವಿನ್‌ನ್ನು ಮರಳಿ ತನ್ನ ಹಿಂಡಿಗೆ ತಲುಪಿಸಲು ಮನುಷ್ಯ ಪ್ರಯತ್ನಗಳು ನಡೆದರೂ, ಮತ್ತೆ ಪರ್ವತದತ್ತ ನಡೆಯುತ್ತಿತ್ತಂತೆ 

ವಿಜ್ಞಾನಿಗಳು ಏನು ಹೇಳುತ್ತಾರೆ?

ವಿಜ್ಞಾನಿಗಳ ಪ್ರಕಾರ, ಇದು ಪೆಂಗ್ವಿನ್‌ನ ಯಾವುದೇ ಸಿದ್ಧಾಂತವಲ್ಲ, ಬದಲಾಗಿ ಒಂದು ರೀತಿಯ ‘ದಿಕ್ಕು ತಪ್ಪುವಿಕೆ’ 

  • ನರವೈಜ್ಞಾನಿಕ ಸಮಸ್ಯೆ: ಪೆಂಗ್ವಿನ್‌ಗಳ ಮೆದುಳಿನಲ್ಲಿರುವ ನ್ಯಾವಿಗೇಷನ್ ವ್ಯವಸ್ಥೆಯಲ್ಲಿ ತೊಂದರೆ ಉಂಟಾದಾಗ ಅವು ಗುಂಪು ಮರೆತು ತಪ್ಪು ದಿಕ್ಕಿನಲ್ಲಿ ಸಾಗುತ್ತವೆ.
  • ಸಾವು ನಿಶ್ಚಿತ: ಒಮ್ಮೆ ಪರ್ವತದ ಕಡೆಗೆ ಹೋದ ಪೆಂಗ್ವಿನ್‌ಗಳು ಅಲ್ಲಿ ಆಹಾರವಿಲ್ಲದೆ ಚಳಿಯಿಂದ ಮೃತಪಡುತ್ತವೆ. ಸಂಶೋಧಕರು ಇವುಗಳನ್ನು ಮತ್ತೆ ತಂದು ಸಮುದ್ರಕ್ಕೆ ಬಿಟ್ಟರೂ, ಅವು ಮತ್ತೆ ಅದೇ ಪರ್ವತದ ಕಡೆಗೇ ಓಡುತ್ತವೆ!

ನೆಟ್ಟಿಗರ ವ್ಯಾಖ್ಯಾನ:

ಸಾಮಾಜಿಕ ಜಾಲತಾಣಗಳಲ್ಲಿ ಈ ಪೆಂಗ್ವಿನ್ ಈಗ ಸ್ವಾತಂತ್ರ್ಯದ ಸಂಕೇತ. “ಯಾವುದೇ ಉದ್ದೇಶವಿಲ್ಲದ ಬದುಕಿಗಿಂತ, ತನಗಿಷ್ಟ ಬಂದ ದಿಕ್ಕಿನಲ್ಲಿ ಸಾಗುವುದೇ ಲೇಸು” ಎಂಬ ಕ್ಯಾಪ್ಷನ್‌ಗಳೊಂದಿಗೆ ಈ ವಿಡಿಯೋ ಹಂಚಿಕೆಯಾಗುತ್ತಿದೆ. ಕಚೇರಿಯ ಕೆಲಸದ ಒತ್ತಡ ಮತ್ತು ಯಾಂತ್ರಿಕ ಜೀವನದಿಂದ ಬೇಸತ್ತವರು ಈ ಪೆಂಗ್ವಿನ್ ಅನ್ನು ತಮ್ಮ ಜೀವನಕ್ಕೆ ಹೋಲಿಸಿಕೊಳ್ಳುತ್ತಿದ್ದಾರೆ.