S Shorts

‘ಇಂದೇ ನಿಮ್ಮ ಕೊನೆಯ ಕೆಲಸದ ದಿನ’: ಬೆಳ್ಳಂಬೆಳಗ್ಗೆ ಉದ್ಯೋಗಿಗಳಿಗೆ Email ಕಳುಹಿಸಿ ವಜಾಗೊಳಿಸಿದ Oracle!

‘ಇಂದೇ ನಿಮ್ಮ ಕೊನೆಯ ಕೆಲಸದ ದಿನ’: ಬೆಳ್ಳಂಬೆಳಗ್ಗೆ ಉದ್ಯೋಗಿಗಳಿಗೆ Email ಕಳುಹಿಸಿ ವಜಾಗೊಳಿಸಿದ Oracle!
Author: Sagaradventure
Posted By: Sagaradventure
Updated: Sep 15, 2026 | 10:52 AM

ಅಮೆರಿಕದ ದಿಗ್ಗಜ ಟೆಕ್ ಕಂಪನಿ ಒರಾಕಲ್ (Oracle) ತನ್ನ ಉದ್ಯೋಗಿಗಳಿಗೆ ಬೆಳ್ಳಂಬೆಳಗ್ಗೆಯೇ ಬಿಗ್ ಶಾಕ್ ನೀಡಿದೆ. ಮಂಗಳವಾರ ಮುಂಜಾನೆ ಉದ್ಯೋಗಿಗಳಿಗೆ ದಿಢೀರ್ ಇಮೇಲ್ ಕಳುಹಿಸಿರುವ ಕಂಪನಿ, ‘ಇಂದೇ ನಿಮ್ಮ ಕೊನೆಯ ಕೆಲಸದ ದಿನ’ ಎಂದು ಹೇಳುವ ಮೂಲಕ ಕೆಲಸದಿಂದ ವಜಾಗೊಳಿಸಿದೆ. 

ಅಚ್ಚರಿಯ ವಿಚಾರವೆಂದರೆ, ಈ ವಜಾಗೊಳಿಸುವ ಇಮೇಲ್ ಬರುವ ಮುನ್ನವೇ ಹಲವು ಉದ್ಯೋಗಿಗಳ ಸಿಸ್ಟಮ್ ಲಾಗಿನ್ ಹಾಗೂ ಕಂಪನಿಯ ಆಂತರಿಕ ಸಂಪರ್ಕ ವ್ಯವಸ್ಥೆಗಳನ್ನು (Slack) ಸ್ಥಗಿತಗೊಳಿಸಲಾಗಿತ್ತು. ಬೆಳಗಿನ ಜಾವ 4 ರಿಂದ 5:30ರ ಸುಮಾರಿಗೆ ಉದ್ಯೋಗಿಗಳ ಸಂಪರ್ಕ ಕಡಿತಗೊಂಡ ಬಳಿಕವಷ್ಟೇ ವಜಾಗೊಳಿಸಿರುವ ಇಮೇಲ್ ಸಂದೇಶ ರವಾನೆಯಾಗಿದೆ.

ಒರಾಕಲ್ ನಾಯಕತ್ವದ (Oracle Leadership) ಹೆಸರಿನಲ್ಲಿ ಬಂದಿರುವ ಈ ಇಮೇಲ್‌ನಲ್ಲಿ, ವ್ಯಾಪಕ ಸಾಂಸ್ಥಿಕ ಬದಲಾವಣೆಯ ಭಾಗವಾಗಿ ಮತ್ತು ಪ್ರಸ್ತುತ ವ್ಯವಹಾರದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಹುದ್ದೆಯನ್ನು ಕಡಿತಗೊಳಿಸುವ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಈ ಕಾರಣದಿಂದಾಗಿ, ಇಮೇಲ್ ಸ್ವೀಕರಿಸಿದ ದಿನವೇ ನಿಮ್ಮ ಕೊನೆಯ ಕೆಲಸದ ದಿನವಾಗಿರುತ್ತದೆ, ಕಂಪನಿಗೆ ನೀವು ನೀಡಿದ ಕೊಡುಗೆಗೆ ನಾವು ಕೃತಜ್ಞರಾಗಿದ್ದೇವೆ ಎಂದು ಹೇಳಲಾಗಿದೆ. 

ನಿಮ್ಮ ಲ್ಯಾಪ್‌ಟಾಪ್, ಇಮೇಲ್ ಹಾಗೂ ಫೈಲ್‌ಗಳ ಆಕ್ಸೆಸ್ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದ್ದು, ಕಂಪನಿಯ ಯಾವುದೇ ಗೌಪ್ಯ ಮಾಹಿತಿಯನ್ನು ಡೌನ್‌ಲೋಡ್ ಅಥವಾ ಕಾಪಿ ಮಾಡಿಕೊಳ್ಳುವಂತಿಲ್ಲ ಎಂದು ಇಮೇಲ್‌ನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವಜಾಗೊಂಡ ಅಮೆರಿಕದ ಉದ್ಯೋಗಿಗಳಿಗೆ ನಾಲ್ಕು ವಾರಗಳ ಮೂಲ ವೇತನದ ಜೊತೆಗೆ, ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ ಹೆಚ್ಚುವರಿಯಾಗಿ ಒಂದು ವಾರದ ವೇತನವನ್ನು ಪರಿಹಾರ ಪ್ಯಾಕೇಜ್ (Severance package) ಆಗಿ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಕೃತಕ ಬುದ್ಧಿಮತ್ತೆ (AI) ಮತ್ತು ಕ್ಲೌಡ್ ಮೂಲಸೌಕರ್ಯಗಳ ಮೇಲೆ ಒರಾಕಲ್ ಕಂಪನಿಯು ಭಾರಿ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿರುವುದೇ ಈ ದಿಢೀರ್ ವಜಾ ಪ್ರಕ್ರಿಯೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಡೇಟಾ ಸೆಂಟರ್ ಸಾಮರ್ಥ್ಯವನ್ನು ವಿಸ್ತರಿಸುವ ಜೊತೆಗೆ, ಆರ್ಥಿಕ ಹೊರೆಯನ್ನು ತಗ್ಗಿಸಲು ಕಂಪನಿ ಮುಂದಾಗಿದೆ. ಒರಾಕಲ್ 2027ನೇ ಹಣಕಾಸು ವರ್ಷದಲ್ಲಿ ಮೂಲಸೌಕರ್ಯಗಳಿಗಾಗಿ ಬರೋಬ್ಬರಿ 90 ರಿಂದ 95 ಶತಕೋಟಿ ಡಾಲರ್ ಬಂಡವಾಳ ಹೂಡಿಕೆ ಮಾಡುವ ಗುರಿ ಹೊಂದಿದೆ. ಈ ಕೃತಕ ಬುದ್ಧಿಮತ್ತೆಯ ಹೂಡಿಕೆಯು ಕಂಪನಿಯ ಆರ್ಥಿಕತೆಯ ಮೇಲೆ ಒತ್ತಡ ಹೆಚ್ಚಿಸಿದೆ. ಆದರೂ, 2027ರ ಮೊದಲ ತ್ರೈಮಾಸಿಕದಲ್ಲಿ ಒರಾಕಲ್‌ನ ಕ್ಲೌಡ್ ಮೂಲಸೌಕರ್ಯ ಆದಾಯವು ಶೇ. 121ರಷ್ಟು ಏರಿಕೆ ಕಂಡು 7.4 ಶತಕೋಟಿ ಡಾಲರ್‌ಗೆ ತಲುಪಿದೆ. 

ಇತ್ತೀಚಿನ ಈ ವಜಾ ಪ್ರಕ್ರಿಯೆಗೂ ಮುನ್ನ ಒರಾಕಲ್ ಸುಮಾರು 1,41,000 ಉದ್ಯೋಗಿಗಳನ್ನು ಹೊಂದಿದ್ದು, 2026ರ ಹಣಕಾಸು ವರ್ಷದಲ್ಲಿಯೇ ಕಂಪನಿಯ ಮಾನವ ಸಂಪನ್ಮೂಲವು ಶೇ. 13ರಷ್ಟು (ಸುಮಾರು 21,000 ಉದ್ಯೋಗಿಗಳು) ಕಡಿತಗೊಂಡಿತ್ತು ಎಂಬುದು ಗಮನಾರ್ಹ.