ಅತ್ಯಂತ ಸೂಕ್ಷ್ಮ ಕಥಾನಕಗಳ ಮೂಲಕವೇ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವ ಸಿದ್ದು ಪೂರ್ಣಚಂದ್ರ ಅವರು ಇದೀಗ `ಪುಟ್ಟಣ್ಣನ ಕತ್ತೆ’ ಎಂಬ ವಿಶಿಷ್ಟ ಚಿತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಸಜ್ಜಾಗಿದ್ದಾರೆ. ಬಿಡುಗಡೆಗೂ ಮುನ್ನವೇ ಈ ಚಿತ್ರವು ಇದೀಗ ಪ್ರತಿಷ್ಠಿತ ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ (Melbourne Film Festival) ಅಧಿಕೃತವಾಗಿ ಆಯ್ಕೆಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿದೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚಿನ ಘನತೆ ಹಾಗೂ ಗೌರವಗಳಿದ್ದು, ಜಾಗತಿಕ ಮಟ್ಟದ ತುರುಸಿನ ಸ್ಪರ್ಧೆ ದಾಟಿಕೊಂಡು ಇಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗುವುದೇ ಒಂದು ಪ್ರಶಸ್ತಿಗೆ ಸಮ ಎಂದು ಪರಿಗಣಿಸಲಾಗುತ್ತದೆ. ಅತ್ಯುತ್ತಮ ಗುಣಮಟ್ಟದ ಕಂಟೆಂಟ್ ಹೊಂದಿದ್ದರಿಂದಲೇ ಈ ಸಾಧನೆ ಸಾಧ್ಯವಾಗಿದೆ.
ಕತ್ತೆಯನ್ನು ಕೇಂದ್ರವಾಗಿಟ್ಟುಕೊಂಡ ವಿಶಿಷ್ಟ ಕಥಾನಕ
ಕನ್ನಡ ಚಿತ್ರರಂಗದ ಮಟ್ಟಿಗೆ ಕತ್ತೆಯೊಂದನ್ನು ಕೇಂದ್ರವಾಗಿಟ್ಟುಕೊಂಡು ರೂಪುಗೊಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ‘ಪುಟ್ಟಣ್ಣನ ಕತ್ತೆ’ ಪಾತ್ರವಾಗಿದೆ. ಬೆಂಗಳೂರಿನಂಥಾ ಮಹಾನಗರಗಳಲ್ಲಿ ಕತ್ತೆ ಹಾಲು ಮಾರುವವರು ಆಗಾಗ ಕಾಣಿಸಿಕೊಳ್ಳುತ್ತಾರೆ. ಅದ್ಯಾವುದೋ ಪರಿಣಾಮದಿಂದ ಕತ್ತೆಯೊಂದಿಗೆ ಪಟ್ಟಣ ಸೇರಿಕೊಂಡ ವ್ಯಕ್ತಿಯೊಬ್ಬನ ಸುತ್ತ ಘಟಿಸುವ ಅತ್ಯಂತ ಆಸಕ್ತಿದಾಯಕ ಕಥೆ ಈ ಸಿನಿಮಾದ ಆಂತರ್ಯದಲ್ಲಿದೆ.
ಭೀಮೇಶ್ ಗೌಡ ಅವರು ಈ ಕಥನದ ಆತ್ಮದಂತಿರುವ ಪುಟ್ಟಣ್ಣನ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿದ್ದಾರೆ. ನಟ ಅನೀಶ್ ಆರ್ಯನ್ ಅವರು ಈ ಸಿನಿಮಾದ ನಾಯಕನಾಗಿ, ಅತ್ಯಂತ ಸಂಕೀರ್ಣವಾದೊಂದು ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
ಚಿತ್ರದ ತಾರಾಗಣ ಹಾಗೂ ತಾಂತ್ರಿಕ ವರ್ಗ
ಪೂರ್ಣಚಂದ್ರ ಫಿಲಂಸ್ ಬ್ಯಾನರಿನಡಿಯಲ್ಲಿ ತನ್ಮಯ್ ಎಸ್. ಗೌಡ ಅವರು ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಸಿನಿಮಾದ ಪ್ರಮುಖ ತಾರಾಗಣದಲ್ಲಿ ಅನೀಶ್ ಆರ್ಯನ್, ಭೀಮೇಶ್ ಗೌಡ, ಎನ್.ಟಿ. ರಾಮಸ್ವಾಮಿ, ಕವಿತಾ ಕಂಬಾರ್, ವಿಭಾ, ಕಲಾರತಿ ಮಹದೇವ್, ರೋಹಿಣಿ, ರಶ್ಮಿ ಮೈಸೂರ್, ಲಕ್ಕಿ ಶಂಕರ್, ವಾಸು, ರಾಕಿ ಹಾಗೂ ಮಂಡ್ಯ ಸಿದ್ದು ಮುಂತಾದವರಿದ್ದಾರೆ. ಈ ವಿಶಿಷ್ಟ ಕಥಾನಕಕ್ಕೆ ರಾಜು ಹೆಮ್ಮಿಗೆಪುರ ಅವರ ಛಾಯಾಗ್ರಹಣ, ಅನಂತ್ ಆರ್ಯನ್ ಅವರ ಸಂಗೀತ ನಿರ್ದೇಶನ ಹಾಗೂ ದೀಪು ಸಿ.ಎಸ್. ಅವರ ಸಂಕಲನವಿದೆ.
