ಕೃತಕ ಬುದ್ಧಿಮತ್ತೆ ಆಧಾರಿತ ಸಂಸ್ಥೆ ಪರ್ಪ್ಲೆಕ್ಸಿಟಿ AI ಶೀಘ್ರದಲ್ಲೇ ಭಾರತೀಯ ರಾಜಕಾರಣಿಗಳ ಷೇರು ಹೂಡಿಕೆಗಳ ಮಾಹಿತಿಯನ್ನು ಬಹಿರಂಗಪಡಿಸಲು ಸಜ್ಜಾಗಿದೆ. ಸಂಸ್ಥೆಯ ಪರ್ಪ್ಲೆಕ್ಸಿಟಿ ಫೈನಾನ್ಸ್ ವೇದಿಕೆಯಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ಧತೆ ನಡೆಯುತ್ತಿದ್ದು, ಇದು ಜನಪ್ರತಿನಿಧಿಗಳ ಆರ್ಥಿಕ ಪಾರದರ್ಶಕತೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎನ್ನಲಾಗಿದೆ.
ಈ ಮಾಹಿತಿಯನ್ನು ಕಂಪನಿಯ ಸಿಇಓ ಅರವಿಂದ್ ಶ್ರೀನಿವಾಸ್ ದೃಢಪಡಿಸಿದ್ದು, ಎಕ್ಸ್ ವೇದಿಕೆಯ ಮೂಲಕ ಈ ಹೊಸ ವೈಶಿಷ್ಟ್ಯ ಮುಂದಿನ ಕೆಲವು ವಾರಗಳಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಪರ್ಪ್ಲೆಕ್ಸಿಟಿ ಫೈನಾನ್ಸ್ ಅಮೆರಿಕದ ರಾಜಕಾರಣಿಗಳ ಷೇರು ವಹಿವಾಟು ಮತ್ತು ಹೂಡಿಕೆಗಳ ವಿವರಗಳನ್ನು ಟ್ರ್ಯಾಕ್ ಮಾಡುವ ಅವಕಾಶ ನೀಡುತ್ತಿದ್ದು, ಭಾರತದತ್ತ ಈ ವಿಸ್ತರಣೆ ಆನ್‌ಲೈನ್‌ನಲ್ಲಿ ಗಮನಾರ್ಹ ಚರ್ಚೆಗೆ ಕಾರಣವಾಗಿದೆ.
ಭಾರತೀಯ ರಾಜಕಾರಣಿಗಳ ಹೂಡಿಕೆಗಳನ್ನು ಟ್ರ್ಯಾಕ್ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅರವಿಂದ್ ಶ್ರೀನಿವಾಸ್, “ಭಾರತೀಯ ರಾಜಕಾರಣಿಗಳ ಹೂಡಿಕೆಗಳ ವಿವರಗಳು ಇನ್ನೂ ಕೆಲವು ವಾರಗಳಲ್ಲಿ ಲಭ್ಯವಾಗುತ್ತವೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಅಮೆರಿಕಾದಂತೆಯೇ, ಭಾರತದ Ai ಆವೃತ್ತಿಯೂ ಬಳಕೆದಾರರಿಗೆ ಕಂಪನಿ ಅಥವಾ ರಾಜಕಾರಣಿಯ ಹೆಸರಿನ ಆಧಾರದ ಮೇಲೆ ಹೂಡಿಕೆಗಳ ವಿವರಗಳನ್ನು ಹುಡುಕುವ ಅವಕಾಶ ನೀಡಲಿದೆ. ಈ ಹೆಜ್ಜೆ ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಹೆಚ್ಚಿಸುವತ್ತ ಮತ್ತೊಂದು ಪ್ರಮುಖ ಪ್ರಯತ್ನವಾಗಲಿದೆ ಎಂದಿದ್ದಾರೆ.
