ರಾಜ್ಯದ ಪೆಟ್ರೋಲ್ ಮತ್ತು ಡೀಸೆಲ್ ಬಂಕ್‌ಗಳಲ್ಲಿ ಇಂಧನ ಅಳತೆ ಮಾಪನದಲ್ಲಿ ಭಾರೀ ವ್ಯತ್ಯಾಸಗಳು ಕಂಡುಬರುತ್ತಿದ್ದು, ಇದರಿಂದ ವಾಹನ ಸವಾರರು ಹಾಗೂ ಗ್ರಾಹಕರಿಗೆ ವಾರ್ಷಿಕವಾಗಿ ಅಂದಾಜು ₹223 ಕೋಟಿ ನಷ್ಟ ಉಂಟಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮೂಲ ಧ್ಯೇಯವಾದ ‘ಕಡಿಮೆಯೂ ಇಲ್ಲ, ಹೆಚ್ಚೂ ಇಲ್ಲ, ನಿಖರವಾದ ಪ್ರಮಾಣ’ (No Less, No More, Just Exact) ಎಂಬ ತತ್ವದಡಿ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಪೆಟ್ರೋಲ್ ಬಂಕ್‌ಗಳ ಮರುಸತ್ಯಾಪನೆ (Recalibration) ಅವಧಿಯನ್ನು ವಿಸ್ತರಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿದೆ.
ಇಲಾಖೆಗೆ ಬಂದ ದೂರುಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಳೆದ ಎಂಟು ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರಮುಖ ಕಂಪನಿಗಳ 805 ಪೆಟ್ರೋಲ್ ಹಾಗೂ ಡೀಸೆಲ್ ಪಂಪ್‌ಗಳಲ್ಲಿ ಸಮಗ್ರ ತಪಾಸಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯ ವೇಳೆ 101 ಪಂಪ್‌ಗಳಲ್ಲಿ ಅನುಮತಿಸಲಾದ ಮಿತಿಗಿಂತಲೂ ಹೆಚ್ಚಿನ, ಅಂದರೆ 10 ಲೀಟರ್‌ಗೆ 50 ಮಿಲಿ ಲೀಟರ್‌ಗಿಂತ ಹೆಚ್ಚು ಮಾಪನ ದೋಷಗಳು ಪತ್ತೆಯಾಗಿವೆ. ನಿಯಮ ಉಲ್ಲಂಘಿಸಿದ ಈ 101 ಪಂಪ್‌ಗಳ ವಿರುದ್ಧ ಕಾನೂನು ಪ್ರಕಾರ ಮೊಕದ್ದಮೆ ದಾಖಲಿಸಲಾಗಿದ್ದು, ಒಟ್ಟು ₹6,66,000 ದಂಡವನ್ನು ವಿಧಿಸಲಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ಈ ನಿರಂತರ ತಪಾಸಣೆ ಕಾರ್ಯಾಚರಣೆಯು ಮುಂದೆಯೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಡಿಸೆಂಬರ್ 2025ರಲ್ಲಿ ತಂದ ಕಾನೂನು ಮಾಪನಶಾಸ್ತ್ರ ನಿಯಮಗಳ ಏಳನೇ ತಿದ್ದುಪಡಿ ಅನ್ವಯ ಪೆಟ್ರೋಲ್ ಬಂಕ್‌ಗಳ ಮರುಸತ್ಯಾಪನೆ ಅವಧಿಯನ್ನು ವರ್ಷಕ್ಕೊಮ್ಮೆಯಿಂದ ಎರಡು ವರ್ಷಕ್ಕೊಮ್ಮೆ ವಿಸ್ತರಿಸಿರುವುದಕ್ಕೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಯಾವುದೇ ವೈಜ್ಞಾನಿಕ ವರದಿಯ ಆಧಾರವಿಲ್ಲದೇ ಕೈಗೊಳ್ಳಲಾದ ಈ ನಿರ್ಧಾರದಿಂದಾಗಿ ತಾಂತ್ರಿಕ ಕಾರಣಗಳಿಂದಾಗಿ ನಿಖರತೆ ತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.
2024-25ರ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಮಾರಾಟವಾದ 1,430.86 ಕೋಟಿ ಲೀಟರ್ ಇಂಧನದಲ್ಲಿ, ಶೇಕಡಾ 85.2ರಷ್ಟು ನೊಜಲ್‌ಗಳಲ್ಲಿ ಮಾಪನ ವ್ಯತ್ಯಾಸ ಕಂಡುಬರುತ್ತಿರುವುದು ಈ ಆರ್ಥಿಕ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ, ಪೆಟ್ರೋಲ್ ಪಂಪ್‌ಗಳ ಸತ್ಯಾಪನೆ ಹಾಗೂ ಮುದ್ರೆ ಪ್ರಕ್ರಿಯೆಯನ್ನು ಖಾಸಗೀಕರಣ ಹಾಗೂ ವಾಣಿಜ್ಯೀಕರಣ ಮಾಡಲು ಹೊರಟಿರುವುದನ್ನೂ ತಕ್ಷಣವೇ ಹಿಂಪಡೆಯಲು ರಾಜ್ಯ ಆಗ್ರಹಿಸಿದೆ.
ಗ್ರಾಹಕರಿಗೆ ಪಾರದರ್ಶಕ ಮಾಹಿತಿ ಒದಗಿಸುವ ಸಲುವಾಗಿ ರಾಜ್ಯದ ಪ್ರತಿಯೊಂದು ಪೆಟ್ರೋಲ್ ಪಂಪ್‌ನ ಸರ್ಕಾರಿ ಪ್ರಮಾಣೀಕರಣ ಮಾಹಿತಿಯನ್ನು ಒಳಗೊಂಡ ಆನ್‌ಲೈನ್ ಡ್ಯಾಶ್‌ಬೋರ್ಡ್ ಅನ್ನು ಇಲಾಖೆಯು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಜೊತೆಗೆ, ಡಿಸೆಂಬರ್ 2026ರೊಳಗೆ ಸತ್ಯಾಪನೆಗೆ ಬಾಕಿಯಿರುವ 2,500 ಪೆಟ್ರೋಲ್ ಪಂಪ್‌ಗಳ ಸಿಂಧುತ್ವದ ಅವಧಿ ಮುಗಿಯುವ ಮೊದಲೇ ನಿಖರತೆಯ ಪರಿಶೀಲನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ನಿಯಮಗಳ ಅನ್ವಯ ಪ್ರತಿಯೊಂದು ಪೆಟ್ರೋಲ್ ಬಂಕ್‌ನಲ್ಲಿ 5 ಅಥವಾ 10 ಲೀಟರ್ ಸಾಮರ್ಥ್ಯದ ಪ್ರಮಾಣೀಕೃತ ಅಳತೆ ಮಾಪನ (Measure Can) ಕಡ್ಡಾಯವಾಗಿ ಲಭ್ಯವಿರಬೇಕು. ಗ್ರಾಹಕರು ಇಚ್ಛಿಸಿದಲ್ಲಿ ಇಂಧನ ವಿತರಣೆಯ ಪ್ರಮಾಣವನ್ನು ಸ್ಥಳದಲ್ಲೇ ಪರಿಶೀಲಿಸಿಕೊಳ್ಳಬಹುದು. ಇಂಧನ ಅಳತೆಯಲ್ಲಿ ಮೋಸ ಕಂಡುಬಂದರೆ ಗ್ರಾಹಕರು ಉಚಿತ ಸಹಾಯವಾಣಿ 1800 599 1100 ಅಥವಾ ಇ-ಮೇಲ್ clm-lm-ka@nic.in ಮೂಲಕ ನೇರವಾಗಿ ದೂರು ಸಲ್ಲಿಸಬಹುದಾಗಿದೆ.
