ಬೆಂಗಳೂರು: ಸಿಲಿಕಾನ್ ಸಿಟಿಯ ಅಂಚಿನಲ್ಲಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಪೆಟ್ರೋಲ್ ಕೊರತೆ (Petrol shortage) ಎದುರಾಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ (ಬಂಕ್ ಮಾಲೀಕರ ಸಂಘ) ಈ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದೆ.
ಅಷ್ಟೇ ಅಲ್ಲದೇ ಈ ಕುರಿತಂತೆ ಬಂಕ್ ಮಾಲೀಕರ ಸಂಘದ ಉಪಾಧ್ಯಕ್ಷ ತಾರಾನಾಥ್ ಅವರು, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಉದ್ದೇಶಪೂರ್ವಕವಾಗಿ ಬಂಕ್‌ಗಳಿಗೆ ಪೆಟ್ರೋಲ್ ಲೋಡ್ ನೀಡುತ್ತಿಲ್ಲ. ಬಂಕ್ ಮಾಲೀಕರು ಪೆಟ್ರೋಲ್‌ಗಾಗಿ ಮುಂಗಡ ಹಣವನ್ನು ಪಾವತಿಸಿದ್ದರೂ, ಕಂಪನಿಗಳು ಪೆಟ್ರೋಲ್ ಕಳುಹಿಸುತ್ತಿಲ್ಲ. ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮತ್ತು ನೆಲಮಂಗಲ (Hoskote Nelamangala)ಭಾಗದ ಬಿಪಿಸಿಎಲ್ ಬಂಕ್‌ಗಳಲ್ಲಿ ಪೆಟ್ರೋಲ್ ಖಾಲಿಯಾಗಿದ್ದು, ಗ್ರಾಹಕರು ಬಂಕ್‌ಗಳಿಂದ ಬರಿಗೈಲಿ ವಾಪಸ್ಸಾಗುತ್ತಿದ್ದಾರೆ ಎಂದು ಪೆಟ್ರೋಲ್ ಕಂಪನಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಗರಕ್ಕೂ ತಟ್ಟಲಿದೆಯೇ ಬಿಸಿ?
ಸದ್ಯ ಗ್ರಾಮಾಂತರ ಪ್ರದೇಶಗಳಲ್ಲಿ ಕಂಡುಬಂದಿರುವ ಈ ಅಭಾವವು ಶೀಘ್ರದಲ್ಲೇ ಬೆಂಗಳೂರು ನಗರದ ಒಳಗೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಅಸೋಸಿಯೇಷನ್ ಎಚ್ಚರಿಸಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ತೈಲ ಕಂಪನಿಗಳೊಂದಿಗೆ ಚರ್ಚಿಸಿ ಪೂರೈಕೆ ಸರಿಪಡಿಸದಿದ್ದರೆ ನಗರದಲ್ಲಿ ಇಂಧನ ಬಿಕ್ಕಟ್ಟು ಸೃಷ್ಟಿಯಾಗುವುದು ಖಚಿತ ಎನ್ನಲಾಗಿದೆ.
