ರಾಯಚೂರು ನಗರದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಯುವಕ-ಯುವತಿಯರನ್ನೇ ಪ್ರಮುಖವಾಗಿ ಗುರಿಯಾಗಿಸಿಕೊಂಡು ಅವರ ಫೋಟೋ ಮತ್ತು ವಿಡಿಯೋಗಳನ್ನು ತೆಗೆದು ಬ್ಲಾಕ್‌ಮೇಲ್ ಮಾಡುತ್ತಿದ್ದ ಮೂವರು ಸುಲಿಗೆಕೋರರ ಗ್ಯಾಂಗ್ ಅನ್ನು ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ್, ತೌಶೀಫ್ ಹಾಗೂ ಓರ್ವ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ರಾತ್ರಿ ವೇಳೆ ಡಾಬಾಗೆ ತಮ್ಮ ಸ್ನೇಹಿತೆಯೊಂದಿಗೆ ಊಟಕ್ಕೆ ತೆರಳಿದ್ದ ಮೆಡಿಕಲ್ ವಿದ್ಯಾರ್ಥಿಯನ್ನು ಈ ಖತರ್ನಾಕ್ ಗ್ಯಾಂಗ್ ಹಿಂಬಾಲಿಸಿತ್ತು. ಏಕಾಏಕಿ ವಿದ್ಯಾರ್ಥಿಗಳ ಫೋಟೋ ಹಾಗೂ ವಿಡಿಯೋಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಕ್ಯಾತೆ ತೆಗೆದ ಆರೋಪಿಗಳು, ತಮಗೆ ಹಣ ನೀಡದಿದ್ದರೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು.
ಅಷ್ಟೇ ಅಲ್ಲದೆ, ವಿದ್ಯಾರ್ಥಿಯ ಬೈಕ್ ಕೀ ಕಸಿದುಕೊಂಡು ತೀವ್ರ ಕಿರುಕುಳ ನೀಡಿದ್ದ ಗ್ಯಾಂಗ್, ಆರಂಭದಲ್ಲಿ 30 ಸಾವಿರ ರೂ. ನಗದು ಪಡೆದು, ಬಳಿಕ ಮತ್ತಷ್ಟು ಹಣಕ್ಕಾಗಿ ಪೀಡಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆನ್‌ಲೈನ್ ಹಾಗೂ ಫೋನ್ ಪೇ ಮೂಲಕ ಹಣ ಪಡೆದರೆ ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರಿಗೆ ಸುಲಭವಾಗಿ ಸಿಕ್ಕಿಬೀಳುವ ಭಯ ಈ ಆರೋಪಿಗಳಿಗಿತ್ತು. ಈ ಕಾರಣಕ್ಕಾಗಿ ಅವರು ಕೇವಲ ನಗದು ರೂಪದಲ್ಲಿ ಮಾತ್ರ ಹಣ ಪಡೆಯುತ್ತಿದ್ದರು. ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸಿ ವಿದ್ಯಾರ್ಥಿಗಳಿಂದ ನಗದು ಹಣ ಪಡೆಯುತ್ತಿದ್ದ ಇವರ ಖತರ್ನಾಕ್ ಆಟ ಕೊನೆಗೂ ಬಯಲಾಗಿದೆ.
ರಾತ್ರಿ ವೇಳೆ ವಾಕಿಂಗ್ ಹೋಗುವ ಮೆಡಿಕಲ್ ವಿದ್ಯಾರ್ಥಿಗಳು ಮತ್ತು ಪ್ರೇಮಿಗಳನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಈ ಜಾಲದ ವಿರುದ್ಧ ಇದೀಗ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
