ಶಿವಮೊಗ್ಗ ಜಿಲ್ಲೆಯಲ್ಲಿ ವನ್ಯಜೀವಿ ಬೇಟೆ ಮತ್ತು ಮಾಂಸ ಮಾರಾಟ ಜಾಲದ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಮನೆಯೊಂದರಲ್ಲಿ ಜಿಂಕೆ ಮಾಂಸ ಬಚ್ಚಿಟ್ಟಿದ್ದ ಆರೋಪದ ಮೇಲೆ ತಂದೆ ಮತ್ತು ಮಗನನ್ನು ಬಂಧಿಸಿದ್ದಾರೆ.
ಸೆಪ್ಟೆಂಬರ್ 18 ರಂದು ಉಂಬಳೇಬೈಲು ವಲಯ ವ್ಯಾಪ್ತಿಯ ಯರಗನಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಗಳಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಅರಣ್ಯಾಧಿಕಾರಿಗಳು ದಿಢೀರ್ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಉಂಬಳೇಬೈಲು ವಲಯದ ರಾತ್ರಿ ಗಸ್ತು ಸಿಬ್ಬಂದಿ ಹಾಗೂ ಲಕ್ಕಿನಕೊಪ್ಪ ಶಾಖೆಯ ಸಿಬ್ಬಂದಿಗೆ ಯರಗನಾಳು ಗ್ರಾಮದ ಮನೆಯೊಂದರಲ್ಲಿ ಜಿಂಕೆ ಮಾಂಸ ಇರುವುದಾಗಿ ರಹಸ್ಯ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆಗಿಳಿದ ಅಧಿಕಾರಿಗಳ ತಂಡವು, ಗ್ರಾಮದ ಸೇತು ಎಂಬುವವರ ಮನೆ ಮೇಲೆ ದಾಳಿ ನಡೆಸಿದೆ.
ಈ ವೇಳೆ ಮನೆಯಲ್ಲಿ ತೀವ್ರ ಶೋಧ ನಡೆಸಿದಾಗ, ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್‌ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಜಿಂಕೆ ಮಾಂಸ ಪತ್ತೆಯಾಗಿದೆ. ಮಾಂಸವನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ 46 ವರ್ಷದ ಸೇತು ಹಾಗೂ ಆತನ 18 ವರ್ಷದ ಪುತ್ರ ಧನುಷ್ ಎಂಬುವವರನ್ನು ಸ್ಥಳದಲ್ಲೇ ಬಂಧಿಸಿದ್ದಾರೆ.
ಈ ಅಕ್ರಮ ಕೃತ್ಯದಲ್ಲಿ ಭಾಗಿಯಾಗಿದ್ದ ಎನ್ನಲಾದ ಲೋಕೇಶ್ ನಾಯ್ಕ್ ಎಂಬಾತ ಅಧಿಕಾರಿಗಳ ದಾಳಿಯ ಸುಳಿವು ಸಿಗುತ್ತಿದ್ದಂತೆ ಪರಾರಿಯಾಗಿದ್ದಾನೆ. ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಅರಣ್ಯ ಅಧಿಕಾರಿಗಳು ಬಲೆಬೀಸಿದ್ದು, ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
