S Shorts

ಕಮಿಷನ್ ಆಸೆಗೆ ಅಪರಿಚಿತರಿಗೆ UPI ಮೂಲಕ ನಗದು ನೀಡಿದ ಯುವಕರಿಗೆ ಬಿಗ್ ಶಾಕ್, ಬ್ಯಾಂಕ್ ಖಾತೆ ಫ್ರೀಜ್!

ಕಮಿಷನ್ ಆಸೆಗೆ ಅಪರಿಚಿತರಿಗೆ UPI ಮೂಲಕ ನಗದು ನೀಡಿದ ಯುವಕರಿಗೆ ಬಿಗ್ ಶಾಕ್, ಬ್ಯಾಂಕ್ ಖಾತೆ ಫ್ರೀಜ್!
Author: Sagaradventure
Posted By: Sagaradventure
Updated: Jun 9, 2026 | 10:11 AM

ರಾಯಚೂರು: ತಾಂತ್ರಿಕತೆ ಬೆಳೆದಂತೆ ಸೈಬರ್ ಅಪರಾಧಗಳ ಸಂಖ್ಯೆಯೂ ಮಿತಿಮೀರುತ್ತಿದ್ದು, ಅಪರಿಚಿತರ ಮಾತನ್ನು ನಂಬಿ ಯುಪಿಐ (UPI) ಮೂಲಕ ಹಣ ಪಡೆದು ನಗದು ನೀಡುವ ಮುನ್ನ ನೂರು ಬಾರಿ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹದೇ ಒಂದು ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯ ಅರಕೇರಾ ಪಟ್ಟಣದಲ್ಲಿ ನಡೆದಿದ್ದು, ಕಮಿಷನ್ ಆಸೆ ಹಾಗೂ ಮಾನವೀಯತೆಯ ದೃಷ್ಟಿಯಿಂದ ಅಪರಿಚಿತರಿಗೆ ಸಹಾಯ ಮಾಡಲು ಹೋದ ಯುವಕರು ಈಗ ಸೈಬರ್ ಪೊಲೀಸರ ವಿಚಾರಣೆ ಎದುರಿಸಿ ಬೆಚ್ಚಿಬಿದ್ದಿದ್ದಾರೆ.

ಮೆಡಿಕಲ್ ಎಮರ್ಜನ್ಸಿ ಎಂದು ನಂಬಿಸಿದ ಕಳ್ಳರು

ಅರಕೇರಾ ಪಟ್ಟಣದಲ್ಲಿ ಕಾಮನ್ ಸರ್ವಿಸ್ ಸೆಂಟರ್ (CSC) ನಡೆಸುತ್ತಿದ್ದ ಮಲ್ಲಿಕಾರ್ಜುನ, ಮಹಾಂತೇಶ್ ಸೇರಿದಂತೆ ಮೂವರು ಯುವಕರ ತಂಡವೇ ಈ ಭಾರಿ ವಂಚನೆಗೆ ಒಳಗಾಗಿದೆ. ಇತ್ತೀಚೆಗೆ ಇವರ ಕೇಂದ್ರಗಳಿಗೆ ಬಂದಿದ್ದ ಇಬ್ಬರು ಅಪರಿಚಿತರು, ತಮಗೆ ತುರ್ತು ವೈದ್ಯಕೀಯ ನೆರವಿನ (Medical Emergency) ಅಗತ್ಯವಿದೆ ಎಂದು ನಂಬಿಸಿದ್ದಾರೆ. ತಮ್ಮ ಫೋನ್ ಪೇ ಮೂಲಕ ಸಿಎಸ್‌ಸಿ ಕೇಂದ್ರದ ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ಹೇಳಿ, ಅದಕ್ಕೆ ಪ್ರತಿಯಾಗಿ ನಗದು ಹಣ ನೀಡುವಂತೆ ವಿನಂತಿಸಿದ್ದಾರೆ. ಜೊತೆಗೆ ಸಾವಿರ ರೂಪಾಯಿಗೆ ಹತ್ತು ರೂಪಾಯಿ ಕಮಿಷನ್ ನೀಡುವುದಾಗಿಯೂ ಆಮಿಷ ಒಡ್ಡಿದ್ದಾರೆ.

ಇದನ್ನು ನಂಬಿದ ಯುವಕರು ಒಟ್ಟು ಮೂರು ಮಳಿಗೆಗಳಿಂದ ಸುಮಾರು ಎರಡೂವರೆ ಲಕ್ಷ ರೂಪಾಯಿ ಹಣದ ಟ್ರಾನ್ಸಾಕ್ಷನ್ ಮಾಡಿಸಿಕೊಂಡು, ಕಳ್ಳರಿಗೆ ನಗದು ಕೊಟ್ಟಿದ್ದಾರೆ. ಆದರೆ, ಆ ಇಬ್ಬರು ವ್ಯಕ್ತಿಗಳು ಕದ್ದ ಮೊಬೈಲ್‌ನಿಂದ ಯುಪಿಐ ಟ್ರಾನ್ಸಾಕ್ಷನ್ ಮಾಡುತ್ತಿದ್ದಾರೆ ಎಂಬ ವಾಸ್ತವ ಸತ್ಯ ಸಿಎಸ್‌ಸಿ ಕೇಂದ್ರದ ಯುವಕರಿಗೆ ತಿಳಿದಿರಲಿಲ್ಲ.

ಮೊಬೈಲ್ ಕಳವು ಮತ್ತು ಪೊಲೀಸ್ ತನಿಖೆ

ಮೇ ಇಪ್ಪತ್ತೈದರಂದು ರಾಯಚೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ರಾಂಬಾಬು ಎಂಬುವವರ ಮೊಬೈಲ್ ಅನ್ನು ಬಸ್ ಹತ್ತುವ ವೇಳೆ ಕಳ್ಳರು ಕದ್ದಿದ್ದರು. ಮೊಬೈಲ್ ಕದ್ದ ಕೆಲವೇ ಗಂಟೆಗಳಲ್ಲಿ ಖದೀಮರು ಅರಕೇರಾದ ಸಿಎಸ್‌ಸಿ ಕೇಂದ್ರಗಳಲ್ಲಿ ರಾಂಬಾಬು ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಸತತವಾಗಿ ಹಣ ಕಡಿತಗೊಂಡ ಮೆಸೇಜ್ ನೋಡಿ ಗಾಬರಿಯಾದ ರಾಂಬಾಬು ಅವರು, ತಕ್ಷಣವೇ ಸದರ ಬಜಾರ್ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಹಣ ವರ್ಗಾವಣೆಯಾದ ಅರಕೇರಾ ಸಿಎಸ್‌ಸಿ ಕೇಂದ್ರದ ಹುಡುಗರಿಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಆಗ ತಮಗೆ ಆ ವ್ಯಕ್ತಿಗಳು ಯಾರೆಂದೇ ಗೊತ್ತಿಲ್ಲ ಎಂದು ಯುವಕರು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಮುಂಜಾಗ್ರತಾ ಕ್ರಮವಾಗಿ ಹಣ ಕಳೆದುಕೊಂಡ ರಾಂಬಾಬು ಹಾಗೂ ಅಪರಿಚಿತರಿಂದ ಹಣ ಹಾಕಿಸಿಕೊಂಡು ನಗದು ಕೊಟ್ಟ ಮಲ್ಲಿಕಾರ್ಜುನ್, ಮಹಾಂತೇಶ್ ಸೇರಿದಂತೆ ಇತರರ ಬ್ಯಾಂಕ್ ಖಾತೆಗಳನ್ನು ಪೊಲೀಸರು ಫ್ರೀಜ್ (Freeze) ಮಾಡಿದ್ದಾರೆ.

ಬ್ಯಾಂಕ್ ಖಾತೆಗಳು ಬ್ಲಾಕ್ ಆಗಿರುವುದರಿಂದ ಸಿಎಸ್‌ಸಿ ಕೇಂದ್ರದ ಯುವಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸದರ ಬಜಾರ್ ಪೊಲೀಸರು ಸದ್ಯ ಮೊಬೈಲ್ ಕಳ್ಳರ ಪತ್ತೆಗೆ ಜಾಲ ಬೀಸಿದ್ದು, ಸಾರ್ವಜನಿಕರು ಇಂತಹ ಆನ್‌ಲೈನ್ ನಗದು ವ್ಯವಹಾರಗಳ ಜೂಜಾಟಕ್ಕೆ ಬೀಳದಂತೆ ಮತ್ತು ಅಪರಿಚಿತರ ಫೋನ್ ಪೇ ನಂಬಿ ನಗದು ನೀಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.