ಮೀರತ್: ಸಾಮಾನ್ಯವಾಗಿ ಮದುವೆ ಎಂದರೆ ಸಂಭ್ರಮ, ಸಡಗರ. ಆದರೆ ವಿಚ್ಛೇದನ ಎಂದರೆ ನೋವು, ಕಣ್ಣೀರು ಎಂಬ ಭಾವನೆ ಎಲ್ಲೆಡೆ ಇದೆ. ಆದರೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಒಂದು ಘಟನೆ ಸಮಾಜಕ್ಕೆ ಹೊಸ ಸಂದೇಶ ನೀಡಿದೆ. ಇಲ್ಲಿನ ನಿವೃತ್ತ ನ್ಯಾಯಾಧೀಶರೊಬ್ಬರು ತಮ್ಮ ಮಗಳ ವಿಚ್ಛೇದನವನ್ನು ಹಬ್ಬದಂತೆ ಆಚರಿಸಿ, ಆಕೆಗೆ ಧೈರ್ಯ ತುಂಬಿದ್ದಾರೆ.
ನಿವೃತ್ತ ನ್ಯಾಯಾಧೀಶ ಜ್ಞಾನೇಂದ್ರ ಶರ್ಮಾ ಅವರ ಪುತ್ರಿ ಪ್ರಣೀತಾ 2021 ರಿಂದ ವಿಚ್ಛೇದನಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದರು. ಮದುವೆಯ ನಂತರದ ಜೀವನ ಕಷ್ಟಕರವಾಗಿದ್ದರಿಂದ ಅವರು ಈ ನಿರ್ಧಾರ ಕೈಗೊಂಡಿದ್ದರು. ಇತ್ತೀಚೆಗೆ ಕೋರ್ಟ್‌ನಿಂದ ವಿಚ್ಛೇದನ ಅಧಿಕೃತವಾಗಿ ದೊರೆತಾಗ, ತಂದೆ ಜ್ಞಾನೇಂದ್ರ ಶರ್ಮಾ ಅವರು ಕೋರ್ಟ್‌ನ ಹೊರಗಡೆಯೇ ಬ್ಯಾಂಡ್ ಸೆಟ್ ಮೂಲಕ ವಾದ್ಯಗಳನ್ನು ನುಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
“ಮಗಳು ಹುಟ್ಟಿದಾಗ ಮನೆಯಲ್ಲಿ ಎಷ್ಟು ಸಂಭ್ರಮವಿತ್ತೋ, ಇವತ್ತು ಆಕೆ ದುಃಖದ ಜೀವನದಿಂದ ಹೊರಬಂದು ಹೊಸ ಬದುಕು ಆರಂಭಿಸುತ್ತಿರುವಾಗಲೂ ಅಷ್ಟೇ ಸಂಭ್ರಮಿಸುತ್ತಿದ್ದೇವೆ. ಮಗಳು ಯಾವುದೇ ಪರಿಸ್ಥಿತಿಯಲ್ಲಿದ್ದರೂ ಆಕೆಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ತೋರಿಸಲು ನಾವು ಈ ರೀತಿ ಮಾಡಿದ್ದೇವೆ” ಎಂದು ಜ್ಞಾನೇಂದ್ರ ಶರ್ಮಾ ಭಾವನಾತ್ಮಕವಾಗಿ ಹೇಳಿದ್ದಾರೆ.
ಈ ಸಂಭ್ರಮದ ವೇಳೆ ಕುಟುಂಬ ಸದಸ್ಯರೆಲ್ಲರೂ ವಿಶೇಷ ಟೀ-ಶರ್ಟ್‌ಗಳನ್ನು ಧರಿಸಿದ್ದರು. ಅದರಲ್ಲಿ‘ಐ ಲವ್ ಮೈ ಡಾಟರ್’, ‘ಮೈ ಹಾರ್ಟ್, ಮೈ ಸೋಲ್’ ಎಂದು ಬರೆಯಲಾಗಿತ್ತು. ವಿಚ್ಛೇದನ ಪಡೆದ ಪ್ರಣೀತಾ ಕೂಡ ‘ಮೈ ಫ್ಯಾಮಿಲಿ, ಮೈ ಲೈಫ್‘ ಎಂಬ ಬರಹವಿದ್ದ ಟೀ-ಶರ್ಟ್ ಧರಿಸಿ ತನ್ನ ಕುಟುಂಬದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
“ವಿಚ್ಛೇದನ ಪಡೆಯುವುದು ನನಗೆ ಇಷ್ಟವಿರಲಿಲ್ಲ, ಸಂಸಾರ ಉಳಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಅನಿವಾರ್ಯವಾಗಿ ಈ ಹಂತಕ್ಕೆ ಬರಬೇಕಾಯಿತು. ಈಗ ನನ್ನ ಕುಟುಂಬ ನನ್ನ ಬೆನ್ನಿಗೆ ನಿಂತಿರುವುದು ನನಗೆ ದೊಡ್ಡ ಶಕ್ತಿ ನೀಡಿದೆ” ಎಂದು ಪ್ರಣೀತಾ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಗಳ ಆತ್ಮಗೌರವಕ್ಕೆ ಬೆಲೆ ನೀಡಿದ ತಂದೆಯ ನಡೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.
