ಬೇಸಿಗೆ ರಜೆ ಹಿನ್ನೆಲೆಯಲ್ಲಿ ಖುಷಿಯಿಂದ ಚಿಕ್ಕಮ್ಮನ ಮನೆಗೆ ಬಂದಿದ್ದ 9 ವರ್ಷದ ಬಾಲಕಿಯೊಬ್ಬಳು ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕುತ್ತಿಗೆಗೆ ಕುಣಿಕೆ ಬಿಗಿದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಶಿವಮೊಗ್ಗ ನಗರದ ವಿದ್ಯಾನಗರ ನಿವಾಸಿ ಪ್ರಣಮ್ಯ (9) ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ಈ ದುರ್ಘಟನೆ ಸಂಭವಿಸಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ಅಕಾಲಿಕ ಮರಣದಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದ್ದು, ಪಾಲಕರ ಆಕ್ರಂದನ ಮುಗಿಲುಮುಟ್ಟಿದೆ.
ಕೋಣೆ ಬಾಗಿಲು ಹಾಕಿಕೊಂಡು ಆಟವಾಡುತ್ತಿದ್ದಾಗ ದುರಂತ:
ಒಂದು ವಾರದ ಹಿಂದೆಯಷ್ಟೇ ಪ್ರಣಮ್ಯ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದಳು. ಏಪ್ರಿಲ್ 20 ರಂದು ಚಿಕ್ಕಮ್ಮನ ಮಕ್ಕಳು ಆಟವಾಡುವಾಗ ಕೀಟಲೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಬೇಸರಗೊಂಡು, ಪ್ರಣಮ್ಯ ಒಬ್ಬಳೇ ಕೋಣೆಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಳು. ಒಳಗೆ ಪಂಚೆಯನ್ನು (Dhoti) ಬಳಸಿ ಜೋಕಾಲಿ ಕಟ್ಟಿಕೊಂಡು ಆಟವಾಡುತ್ತಿದ್ದಾಗ, ಆಕಸ್ಮಿಕವಾಗಿ ಪಂಚೆಯ ಕುಣಿಕೆ ಆಕೆಯ ಕುತ್ತಿಗೆಗೆ ಬಿಗಿದುಕೊಂಡಿದೆ. ತಕ್ಷಣವೇ ಉಸಿರಾಟಕ್ಕೆ ತೊಂದರೆಯಾಗಿ ಬಾಲಕಿ ಒದ್ದಾಡಿದ್ದಾಳೆ. ಸ್ವಲ್ಪ ಹೊತ್ತಿನ ಬಳಿಕ ಕುಟುಂಬಸ್ಥರು ಕೋಣೆಯ ಬಾಗಿಲು ತೆಗೆದು ನೋಡುವಷ್ಟರಲ್ಲಿ ಪ್ರಣಮ್ಯ ಪ್ರಾಣ ಕಳೆದುಕೊಂಡಿದ್ದಳು.
ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ಹಾಗೂ ಕೋಣೆಯನ್ನು ಪರಿಶೀಲಿಸುತ್ತಿದ್ದಾರೆ. ಮಕ್ಕಳನ್ನು ಒಂಟಿಯಾಗಿ ಆಟವಾಡಲು ಬಿಡುವಾಗ ಪೋಷಕರು ಅವರ ಸುರಕ್ಷತೆಯ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದಿತ್ತು ಮತ್ತೊಂದು ದುರಂತ:
ಇತ್ತೀಚೆಗಷ್ಟೇ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ಇಂತಹುದೇ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿತ್ತು. ಮನೆಯಿಂದಲೇ ಕೆಲಸ ಮಾಡುತ್ತಿದ್ದ ತಾಯಿ ಪ್ರತಿಭಾ ಅವರು, ಸಂಜೆ ಟೆರೇಸ್ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಹೋಗಿದ್ದರು. ಇದೇ ವೇಳೆ ಆಟವಾಡುತ್ತಾ ಬಚ್ಚಲು ಮನೆಗೆ ಹೋದ 11 ತಿಂಗಳ ಹಸುಗೂಸು, ಅಲ್ಲಿ ನೀರಿನಿಂದ ತುಂಬಿದ್ದ ಬಕೆಟ್‌ನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿತ್ತು. ಮಗುವಿನ ಸಾವಿಗೆ ನಾನೇ ಕಾರಣ ಎಂಬ ತೀವ್ರ ಅಪರಾಧ ಪ್ರಜ್ಞೆಯಿಂದ ಮನನೊಂದು ಆಘಾತಕ್ಕೊಳಗಾದ ತಾಯಿಯೂ ಅದೇ ದಿನ ಆತ್ಮಹತ್ಯೆಗೆ ಶರಣಾಗಿದ್ದರು.
