ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಹಾಗೂ ವಿವಾದ ಸೃಷ್ಟಿಸಿರುವ ನಕಲಿ ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆ ವೇಣುಗೋಪಾಲ್ ಅವರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿರುವ ಸಿದ್ದರಾಮಯ್ಯ, ಈ ಪ್ರಕರಣದ ಹಿಂದಿರುವ ಷಡ್ಯಂತ್ರಗಳು ಹಾಗೂ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದಾರೆ.
ತಮ್ಮ ವಿರುದ್ಧದ ಈ ಸ್ಟಿಂಗ್ ಪ್ರಕರಣದಿಂದ ತೀವ್ರ ಅಸಮಾಧಾನಗೊಂಡಿರುವ ಸಿದ್ದರಾಮಯ್ಯ ಅವರು, ಕೆ.ಸಿ. ವೇಣುಗೋಪಾಲ್ ಅವರನ್ನು ನೇರವಾಗಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಇಂದು ಸಂಜೆ ದೆಹಲಿಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮತ್ತೊಂದು ‘ಮೆಗಾ ಮೀಟಿಂಗ್’ ನಿಗದಿಯಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ಸಂಜೆಯ ಈ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಭೇಟಿಯೂ ನಡೆಯಲಿದ್ದು, ಅವರ ಮುಂದಿಡಲು ಸಿದ್ದರಾಮಯ್ಯ ಸಿದ್ಧಪಡಿಸಿರುವ ‘ಚಾರ್ಜ್ ಶೀಟ್’ನಲ್ಲಿ ಯಾವೆಲ್ಲಾ ಅಂಶಗಳಿರಲಿವೆ ಎಂಬುದು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷಗಳ ಆರೋಪಗಳು ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಮುಂದೆ ಯಾವ ರೀತಿಯ ರಣತಂತ್ರ ರೂಪಿಸಲಿದ್ದಾರೆ ಕಾದುನೋಡಬೇಕಿದೆ.
