ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಗುಸುಗುಸು ಜೋರಾಗಿರುವಾಗಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ಆಯೋಜಿಸಿದ್ದ ಮಹತ್ವದ ಔತಣಕೂಟಕ್ಕೆ ಗೈರಾಗುವ ಮೂಲಕ ಕುತೂಹಲ ಮತ್ತು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ‘ವೋಟ್ ಚೋರ್’ (ಮತ ಕಳ್ಳತನ) ರ‍್ಯಾಲಿಗೂ ಮುನ್ನ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದಿರಾ ಭವನದಲ್ಲಿ ಹಿರಿಯ ನಾಯಕರಿಗಾಗಿ ಮಧ್ಯಾಹ್ನ 1 ಗಂಟೆಗೆ ಭೋಜನ ಏರ್ಪಡಿಸಿದ್ದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದರಲ್ಲಿ ಭಾಗವಹಿಸಿದ್ದರು. ಆದರೆ, ಆಹ್ವಾನವಿದ್ದರೂ ಸಿಎಂ ಸಿದ್ದರಾಮಯ್ಯ ಮಾತ್ರ ಈ ಊಟಕ್ಕೆ ಗೈರಾಗಿದ್ದರು.
ನಿಗದಿತ ಕಾರ್ಯಕ್ರಮದಂತೆ ಸಿಎಂ ಸಿದ್ದರಾಮಯ್ಯ ಅವರು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಹೊರಟು 12.30ಕ್ಕೆ ದೆಹಲಿ ತಲುಪಬೇಕಿತ್ತು. ಆದರೆ, ವಿಮಾನ ತಡವಾಗಿ (10.30ಕ್ಕೆ) ಹೊರಟು ಮಧ್ಯಾಹ್ನ 1 ಗಂಟೆಗೆ ದೆಹಲಿಗೆ ತಲುಪಿತು. ಅಲ್ಲಿಂದ ನೇರವಾಗಿ ಕರ್ನಾಟಕ ಭವನಕ್ಕೆ ತೆರಳಿದ ಅವರು, ತಮ್ಮ ಪೂರ್ವನಿಗದಿತ ಪಟ್ಟಿಯಂತೆ ಅಲ್ಲೇ ಊಟ ಮುಗಿಸಿದರು. ನಂತರ ನೇರವಾಗಿ ರ‍್ಯಾಲಿಯಲ್ಲಿ ಭಾಗವಹಿಸಿ, ಸಂಜೆ 5.15ರ ಸುಮಾರಿಗೆ ಬೆಳಗಾವಿಗೆ ಹೋಗಲು ವಿಮಾನ ಏರಿದರು. ಈ ಅವಧಿಯಲ್ಲಿ ಅವರು ಹೈಕಮಾಂಡ್ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಲಿಲ್ಲ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ನಾಯಕತ್ವದ ಹಗ್ಗಜಗ್ಗಾಟ ನಡೆಯುತ್ತಿರುವ ಸಂದರ್ಭದಲ್ಲೇ ಸಿಎಂ ಅವರ ಈ ನಡೆ ಮಹತ್ವ ಪಡೆದುಕೊಂಡಿದೆ. ಔತಣಕೂಟಕ್ಕೆ ಗೈರಾಗುವ ಮೂಲಕ ಹೈಕಮಾಂಡ್‌ಗೆ ಪರೋಕ್ಷವಾಗಿ ತಮ್ಮ ಅಸಮಾಧಾನ ಅಥವಾ ಸಂದೇಶವನ್ನು ರವಾನಿಸಲು ಅವರು ಯತ್ನಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಹಿಮಾಚಲ ಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳು ಊಟದಲ್ಲಿ ಭಾಗವಹಿಸಿ, ರ‍್ಯಾಲಿಯಲ್ಲಿ ಭಾಷಣವನ್ನೂ ಮಾಡಿದರು. ಆದರೆ, ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಇಬ್ಬರೂ ರ‍್ಯಾಲಿಯಲ್ಲಿ ಮಾತನಾಡಲಿಲ್ಲ.
ಮತ್ತೊಂದೆಡೆ, ಶನಿವಾರವೇ ದೆಹಲಿಗೆ ಆಗಮಿಸಿದ್ದ ಡಿ.ಕೆ. ಶಿವಕುಮಾರ್, ಹೈಕಮಾಂಡ್ ನಾಯಕರೊಂದಿಗೆ ಸಕ್ರಿಯವಾಗಿ ಬೆರೆತಿದ್ದರು. ಕಾರ್ಯಕ್ರಮದ ನಂತರವೂ ದೆಹಲಿಯಲ್ಲೇ ಉಳಿದ ಅವರು, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
