ಬೆಂಗಳೂರು: ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರ ವಿವಾದಕ್ಕೆ ಕಾರಣವಾಗಿತ್ತು. ಹೈಕೋರ್ಟ್ ಮಧ್ಯಪ್ರವೇಶಿಸಿ ಅಂಕಗಳನ್ನೇ ನೀಡಲು ಆದೇಶಿಸಿದ್ದರಿಂದ, ವಿಶೇಷವಾಗಿ ಹಿಂದಿ ವಿಷಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ತೃತೀಯ ಭಾಷೆಯಾಗಿ ಹಿಂದಿ ಆಯ್ಕೆ ಮಾಡಿಕೊಂಡಿದ್ದ ಸಾವಿರಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಸರ್ಕಾರದ ‘ಗ್ರೇಡ್’ ಪದ್ಧತಿಯ ಯಡವಟ್ಟಿಗೆ ಹೈಕೋರ್ಟ್ ಬೀಸಿದ ಚಾಟಿಯ ಬಿಸಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಬರೆ ಹಾಕಿದೆ.
ಈ ವರ್ಷ ಒಟ್ಟು 7,69,751 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 7,58,623 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಒಟ್ಟು 11,128 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಅದರಲ್ಲೂ ವಿಶೇಷವಾಗಿ, ತೃತೀಯ ಭಾಷೆಯಾಗಿ ಹಿಂದಿಯನ್ನು ಆಯ್ಕೆ ಮಾಡಿಕೊಂಡಿದ್ದ 7,02,009 ವಿದ್ಯಾರ್ಥಿಗಳ ಪೈಕಿ 6,92,528 ಮಂದಿ ಉತ್ತೀರ್ಣರಾಗಿದ್ದಾರೆ. ಆದರೆ, ಬರೋಬ್ಬರಿ 9,481 ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಫೇಲ್ ಆಗುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೃತೀಯ ಭಾಷೆಯಲ್ಲಿ ಅನುತ್ತೀರ್ಣರಾದವರ ಪೈಕಿ ಬಹುಪಾಲು ವಿದ್ಯಾರ್ಥಿಗಳು ಹಿಂದಿ ಭಾಷೆಯವರೇ ಆಗಿರುವುದು ಗಮನಾರ್ಹ
