S Shorts

ಸ್ಟಾರ್ ಸುವರ್ಣದಲ್ಲಿ ಶುರುವಾಗಲಿದೆ ಹೊಸ ಧಾರಾವಾಹಿ ‘ಓ ಮನಸೇ’: ಭಿನ್ನ ಮನಸುಗಳ ಪ್ರೇಮಕಥೆ ನ.10ರಿಂದ ಪ್ರಸಾರ!

ಸ್ಟಾರ್ ಸುವರ್ಣದಲ್ಲಿ ಶುರುವಾಗಲಿದೆ ಹೊಸ ಧಾರಾವಾಹಿ ‘ಓ ಮನಸೇ’: ಭಿನ್ನ ಮನಸುಗಳ ಪ್ರೇಮಕಥೆ ನ.10ರಿಂದ ಪ್ರಸಾರ!
Author: Sagaradventure
Posted By: Sagaradventure
Updated: Nov 6, 2026 | 9:51 AM

ಬೆಂಗಳೂರು: ಹೊಸ ಬಗೆಯ ವಿಭಿನ್ನ ಧಾರಾವಾಹಿಗಳ ಮೂಲಕ ಕನ್ನಡಿಗರ ಮನಗೆಲ್ಲುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು, ಇದೀಗ ‘ಓ ಮನಸೇ’ ಎಂಬ ಹೊಚ್ಚ ಹೊಸ ಕಥೆಯನ್ನು ಪ್ರೇಕ್ಷಕರ ಮುಂದಿಡಲು ಸಜ್ಜಾಗಿದೆ. ಎರಡು ಭಿನ್ನ ಮನಸುಗಳ, ವಿಭಿನ್ನ ನಂಬಿಕೆಗಳ ಅಸಾಧ್ಯ ಪ್ರೇಮಕಥೆಯನ್ನೊಳಗೊಂಡ ಈ ಧಾರಾವಾಹಿಯು ಇದೇ ನವೆಂಬರ್ 10ರಿಂದ (ಮಂಗಳವಾರ) ಪ್ರತಿದಿನ ರಾತ್ರಿ 8.30ಕ್ಕೆ ಸ್ಟಾರ್ ಸುವರ್ಣ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ (JioHotstar) ಪ್ರಸಾರವಾಗಲಿದೆ.

ಮೈಸೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ, ಶಿಕ್ಷಣವೇ ತನ್ನ ಬದುಕಿನ ಉಸಿರು ಎಂದು ನಂಬಿರುವ ನಾಯಕಿ ‘ರಾಗಾ’ ಹಾಗೂ ಪ್ರೀತಿಯ ಮೇಲೆಯೇ ನಂಬಿಕೆಯಿಲ್ಲದ, ತನ್ನ ಭಾವನೆಗಳನ್ನು ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಂಡಿರುವ ಶ್ರೀಮಂತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ‘ರಿಷಿ’ ಈ ಕಥೆಯ ಪ್ರಮುಖ ಜೀವಾಳ. ಮುಗಿಲು ಮುಟ್ಟುವ ಕನಸು ಕಂಡಿರುವ ರಾಗಾಗೆ ಅವಳ ಸ್ವಂತ ತಂದೆಯೇ ತಡೆಗೋಡೆಯಾಗಿದ್ದರೆ, ಆಕೆಗೆ ಪ್ರೊಫೆಸರ್ ಕಲ್ಯಾಣಿ ಅತಿದೊಡ್ಡ ಸ್ಫೂರ್ತಿ. 

ಆದರೆ ಇತ್ತ ನಾಯಕ ರಿಷಿಗೆ ಆತನ ತಾಯಿ ಕಲ್ಯಾಣಿಯ ಮೇಲೆಯೇ ತೀವ್ರ ಅಸಹನೆ ಇದೆ. ಸಂಪೂರ್ಣ ವಿರುದ್ಧ ದಿಕ್ಕಿನ ವ್ಯಕ್ತಿತ್ವ ಹೊಂದಿರುವ ರಾಗಾ ಹಾಗೂ ರಿಷಿ ಒಂದಾಗಲು ಸಾಧ್ಯವೇ? ತಂದೆಯ ವಿರೋಧದ ನಡುವೆಯೂ ರಾಗಾ ತನ್ನ ಕನಸು ನನಸು ಮಾಡುತ್ತಾಳಾ? ಎನ್ನುವುದೇ ಈ ಧಾರಾವಾಹಿಯ ಪ್ರಮುಖ ಕಥಾಹಂದರವಾಗಿದೆ.

ಅತ್ಯದ್ಭುತ ತಾರಾಬಳಗವನ್ನು ಹೊಂದಿರುವ ಈ ಧಾರಾವಾಹಿಯಲ್ಲಿ ನಾಯಕ ರಿಷಿಯಾಗಿ ದರ್ಶಕ್ ಗೌಡ ಹಾಗೂ ನಾಯಕಿ ರಾಗಾ ಆಗಿ ಮಧುಮಿತಾ ಗೌಡ ಬಣ್ಣ ಹಚ್ಚಿದ್ದಾರೆ. ಇವರೊಂದಿಗೆ ಅಶ್ವಿನಿ ಗೌಡ, ಅಜಿತ್ ಹಂದೆ, ರೇಖಾ ಕೃಷ್ಣಪ್ಪ, ರಮೇಶ್ ಪಂಡಿತ್, ಸಹನಾ, ಪ್ರಮೋದ್ ರಾಜ್, ದೀಪಾ ಕಟ್ಟೆ ಸೇರಿದಂತೆ ದೊಡ್ಡ ಅನುಭವಿ ತಾರಾಬಳಗವೇ ಇದೆ. ಬಿ. ಮಧುಸೂದನ್ ಅವರ ನಿರ್ದೇಶನವಿರುವ ಈ ಧಾರಾವಾಹಿಯನ್ನು ‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಬ್ಯಾನರ್ ಅಡಿ ಗಣಪತಿ ಭಟ್ ನಿರ್ಮಿಸುತ್ತಿದ್ದಾರೆ.

ಸಮಯ ಬದಲಾವಣೆ: ಹೊಸ ಧಾರಾವಾಹಿಯ ಆಗಮನದ ಹಿನ್ನೆಲೆಯಲ್ಲಿ ವೀಕ್ಷಕರ ನೆಚ್ಚಿನ ಧಾರಾವಾಹಿಯಾದ “ವಸುದೇವ ಕುಟುಂಬ” ಪ್ರಸಾರದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ನವೆಂಬರ್ 10ರಿಂದ ಈ ಧಾರಾವಾಹಿಯು ಪ್ರತಿದಿನ ರಾತ್ರಿ 9.00 ಗಂಟೆಗೆ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ.