S Shorts

CM Cabinet | ಹಲವು ಮಹತ್ವದ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟದ ಅಸ್ತು

CM Cabinet | ಹಲವು ಮಹತ್ವದ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟದ ಅಸ್ತು
Author: Sagaradventure
Posted By: Sagaradventure
Updated: Nov 27, 2025 | 5:12 PM

ಬೆಂಗಳೂರು: ರಾಜ್ಯ ಸಚಿವ ಸಂಪುಟವು ಗುರುವಾರ (ನ.27) ನಡೆದ ಸಭೆಯಲ್ಲಿ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಿದೆ. ಅದರ ಮುಖ್ಯಾಂಶಗಳು ಇಲ್ಲಿವೆ.

ಬೆಳಗಾವಿಯ ಮುರುಗೋಡು ಬಳೆ ತಯಾರಕರಿಗೆ ಸಿಹಿಸುದ್ದಿ: 5 ಎಕರೆ ಜಮೀನು ಮಂಜೂರು

​ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರುಗೋಡು ಗ್ರಾಮದಲ್ಲಿ ಬಳೆ ತಯಾರಿಕೆಯನ್ನೇ ನಂಬಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ಇಲ್ಲಿನ ಬಳೆ ತಯಾರಕರ ಫೌಂಡೇಶನ್‌ಗೆ ಸಾಮಾನ್ಯ ಸೌಲಭ್ಯ ಕೇಂದ್ರ ಸ್ಥಾಪಿಸಲು 5 ಎಕರೆ ಸರ್ಕಾರಿ ಜಮೀನನ್ನು 35 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ವಿಶೇಷವೆಂದರೆ, ವಾರ್ಷಿಕ ಗುತ್ತಿಗೆ ಬಾಡಿಗೆಯನ್ನು ಮನ್ನಾ ಮಾಡಿ ಉಚಿತವಾಗಿ ಜಮೀನು ನೀಡಲಾಗುತ್ತಿದ್ದು, ಸರ್ಕಾರದ ಪಾಲಿನ ಶೇ.15ರಷ್ಟು ಅನುದಾನವನ್ನೂ (ರೂ. 149.31 ಲಕ್ಷ) ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಸುಮಾರು 1240 ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ.

ರಾಜ್ಯ ದತ್ತಾಂಶ ಕೇಂದ್ರ ನಿರ್ವಹಣೆಗೆ 143.6 ಕೋಟಿ ರೂ. ಅನುಮೋದನೆ

​ಸರ್ಕಾರದ ಡಿಜಿಟಲ್ ಬೆನ್ನೆಲುಬಾಗಿರುವ ರಾಜ್ಯ ದತ್ತಾಂಶ ಕೇಂದ್ರ (State Data Centre) ಹಾಗೂ ವಿಪತ್ತು ಚೇತರಿಕಾ ಕೇಂದ್ರಗಳ (Disaster Recovery Centres) ಸುಗಮ ನಿರ್ವಹಣೆಗೆ ಸರ್ಕಾರ ಮುಂದಾಗಿದೆ. ಮುಂದಿನ ಐದು ವರ್ಷಗಳ ಅವಧಿಗೆ ಈ ಕೇಂದ್ರಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ಸೇವೆಯನ್ನು ನಿರ್ವಹಿಸಲು ಸೂಕ್ತ ಸಂಸ್ಥೆಯನ್ನು ಆಯ್ಕೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಇದಕ್ಕಾಗಿ ತೆರಿಗೆಯೂ ಸೇರಿ ಒಟ್ಟು 143.6 ಕೋಟಿ ರೂ.ಗಳ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಹಳೆಯ ಒಪ್ಪಂದಗಳು ಮುಕ್ತಾಯದ ಹಂತದಲ್ಲಿರುವುದರಿಂದ ಹೊಸ ಟೆಂಡರ್ ಪ್ರಕ್ರಿಯೆ ನಡೆಯಲಿದೆ.

ರಾಜ್ಯದಾದ್ಯಂತ 114 ಹೊಸ ಆಯುಷ್ಮಾನ್ ಆರೋಗ್ಯ ಮಂದಿರಗಳ ನಿರ್ಮಾಣ

​ಗ್ರಾಮೀಣ ಭಾಗದ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆಯನ್ನು ಬಲಪಡಿಸುವ ನಿಟ್ಟಿನಲ್ಲಿ, 2025-26ನೇ ಸಾಲಿನಲ್ಲಿ 15ನೇ ಹಣಕಾಸು ಆಯೋಗದ ಅನುದಾನದಡಿ ರಾಜ್ಯಾದ್ಯಂತ 114 ಆಯುಷ್ಮಾನ್ ಆರೋಗ್ಯ ಮಂದಿರಗಳ ಕಟ್ಟಡ ನಿರ್ಮಾಣಕ್ಕೆ ಸಂಪುಟ ಹಸಿರು ನಿಶಾನೆ ತೋರಿದೆ. ಒಟ್ಟು 74.10 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಗಳನ್ನು ಕೆ.ಟಿ.ಟಿ.ಪಿ ಕಾಯ್ದೆಯಡಿ ಟೆಂಡರ್ ಮೂಲಕ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ನಕಲಿ ಔಷಧ ಮಾರಾಟಗಾರರಿಗೆ ಇನ್ನು ಜೀವಾವಧಿ ಶಿಕ್ಷೆ? ಕಾಯ್ದೆಗೆ ತಿದ್ದುಪಡಿ

​ಕಲಬೆರಕೆ ಹಾಗೂ ನಕಲಿ ಔಷಧಗಳ ಹಾವಳಿ ತಡೆಯಲು ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ‘ಔಷಧಗಳು ಮತ್ತು ಸೌಂದರ್ಯವರ್ಧಕಗಳು (ಕರ್ನಾಟಕ ತಿದ್ದುಪಡಿ) ವಿಧೇಯಕ-2025’ ಕ್ಕೆ ಸಂಪುಟ ಅನುಮೋದನೆ ನೀಡಿದೆ. ಇದರನ್ವಯ, ಕೆಲವೊಂದು ಗಂಭೀರ ಸ್ವರೂಪದ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲು ಮತ್ತು ಜಾಮೀನು ರಹಿತ ಅಪರಾಧವನ್ನಾಗಿ ಪರಿಗಣಿಸಲು ಪ್ರಸ್ತಾಪಿಸಲಾಗಿದೆ. ಅಲ್ಲದೆ, ತಾನು ತಪ್ಪು ಮಾಡಿಲ್ಲ ಎಂದು ಸಾಬೀತುಪಡಿಸುವ ಹೊಣೆಯನ್ನು ಆರೋಪಿತ ವ್ಯಕ್ತಿಯ ಮೇಲೆಯೇ ಹೊರಿಸುವ ಮಹತ್ವದ ಬದಲಾವಣೆಯನ್ನು ಈ ತಿದ್ದುಪಡಿ ಒಳಗೊಂಡಿದೆ.

ಸಿನಿಮಾ ಟಿಕೆಟ್ ಮೇಲೆ ಸೆಸ್: ಕಲಾವಿದರ ಕಲ್ಯಾಣಕ್ಕೆ ಹೊಸ ವಿಧೇಯಕ

​ಸಿನಿಮಾ ಹಾಗೂ ಸಾಂಸ್ಕೃತಿಕ ರಂಗದ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಮಲ್ಟಿಪ್ಲೆಕ್ಸ್ ಸಿನಿಮಾ ಟಿಕೆಟ್‌ಗಳ ಮೇಲೆ ಶೇ. 2 ರಷ್ಟು ಸೆಸ್ ವಿಧಿಸುವ ಪ್ರಸ್ತಾವನೆಗೆ ಬಲ ತುಂಬಲು ಸರ್ಕಾರ ಮುಂದಾಗಿದೆ. ‘ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) (ತಿದ್ದುಪಡಿ) ವಿಧೇಯಕ-2025’ ಅನ್ನು ವಿಧಾನಮಂಡಲದಲ್ಲಿ ಮಂಡಿಸಲು ಸಂಪುಟ ಒಪ್ಪಿಗೆ ನೀಡಿದೆ. ಇದು ಅಸಂಘಟಿತ ವಲಯದ ಕಲಾವಿದರು ಮತ್ತು ತಂತ್ರಜ್ಞರಿಗೆ ಸಾಮಾಜಿಕ ಭದ್ರತೆ ಒದಗಿಸಲು ನಿಧಿ ಸಂಗ್ರಹಿಸಲು ನೆರವಾಗಲಿದೆ.

ಕಲ್ಯಾಣ ಕರ್ನಾಟಕಕ್ಕೆ ಜಲ ಸಂಜೀವಿನಿ: 200 ಕೋಟಿ ರೂ.ಗಳ ಚೆಕ್ ಡ್ಯಾಂ ಯೋಜನೆ

​ಬರಪೀಡಿತ ಕಲ್ಯಾಣ ಕರ್ನಾಟಕ ಭಾಗದ ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಕೆರೆಗಳ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ 200 ಕೋಟಿ ರೂ.ಗಳ ಬೃಹತ್ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಶಿರಾಪೂರ ಮಾದರಿಯಲ್ಲಿ ಸರಣಿ ಚೆಕ್ ಡ್ಯಾಂಗಳನ್ನು ನಿರ್ಮಿಸುವ ಮೂಲಕ ಸುಮಾರು 2500 ಹೆಕ್ಟೇರ್ ಪ್ರದೇಶಕ್ಕೆ ಪರೋಕ್ಷ ನೀರಾವರಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಹಜ್ ಯಾತ್ರೆಗೆ ಹೊಸ ನಿಯಮಾವಳಿ: ಪಾರದರ್ಶಕತೆಗೆ ಆದ್ಯತೆ

​ರಾಜ್ಯದಿಂದ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳ ಸೇವೆ ಮತ್ತು ಹಜ್ ಸಮಿತಿಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರಲು ‘ಕರ್ನಾಟಕ ರಾಜ್ಯ ಹಜ್ ಸಮಿತಿ ನಿಯಮಾವಳಿ 2025’ ಅನ್ನು ಜಾರಿಗೆ ತರಲು ಸಂಪುಟ ನಿರ್ಧರಿಸಿದೆ. ಇದುವರೆಗೂ ಸಮಿತಿಗೆ ನಿರ್ದಿಷ್ಟ ಕಾರ್ಯವಿಧಾನದ ನಿಯಮಗಳು ಇರಲಿಲ್ಲ. ಕೇಂದ್ರ ಹಜ್ ಕಾಯ್ದೆ ಅನ್ವಯ ಈ ಹೊಸ ನಿಯಮಗಳನ್ನು ರೂಪಿಸಲಾಗಿದ್ದು, ಹಜ್ ಶಿಬಿರಗಳು ಮತ್ತು ಯಾತ್ರಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಇದು ಹೆಚ್ಚು ವ್ಯವಸ್ಥಿತಗೊಳಿಸಲಿದೆ.

ಬೆಂಗಳೂರಿಗರಿಗೆ ಬಂಪರ್ ಆಫರ್: ನೀರಿನ ಬಿಲ್ ಬಡ್ಡಿ ಸಂಪೂರ್ಣ ಮನ್ನಾ!

​ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಬಾಕಿ ಉಳಿಸಿಕೊಂಡಿರುವ ನೀರಿನ ಬಿಲ್‌ನ ಅಸಲು ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದರೆ, ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳನ್ನು ಶೇ. 100 ರಷ್ಟು ಮನ್ನಾ ಮಾಡುವ ‘ಏಕಕಾಲಿಕ ಸೆಟಲ್‌ಮೆಂಟ್ (OTS)’ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. ಮುಂದಿನ 3 ತಿಂಗಳವರೆಗೆ ಮಾತ್ರ ಈ ಯೋಜನೆ ಜಾರಿಯಲ್ಲಿರುತ್ತದೆ. ಇದರಿಂದ ಮಂಡಳಿಗೆ ಸುಮಾರು 439 ಕೋಟಿ ರೂ. ಅಸಲು ವಸೂಲಾಗುವ ನಿರೀಕ್ಷೆಯಿದೆ.

ಶರಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್: 200 ಕೋಟಿ ರೂ. ಯೋಜನೆ

​ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮತ್ತು ಭಟ್ಕಳ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಮುಳ್ಕೊಡು ಗ್ರಾಮದ ಬಳಿ ಶರಾವತಿ ನದಿಗೆ ಅಡ್ಡಲಾಗಿ ‘ಬ್ರಿಡ್ಜ್ ಕಂ ಬ್ಯಾರೇಜ್’ (ಉಪ್ಪು ನೀರು ತಡೆ ಅಣೆಕಟ್ಟು) ನಿರ್ಮಾಣಕ್ಕೆ 200 ಕೋಟಿ ರೂ.ಗಳ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇದರಿಂದ ನದಿ ಪಾತ್ರದ ಗ್ರಾಮಗಳಿಗೆ ಸಿಹಿ ನೀರು ಲಭ್ಯವಾಗುವುದಲ್ಲದೆ, ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುವುದು ತಪ್ಪಲಿದೆ. ಪ್ರಸಕ್ತ ಸಾಲಿನಲ್ಲಿ 50 ಕೋಟಿ ರೂ. ವೆಚ್ಚದ ಮಿತಿಯಲ್ಲಿ ಟೆಂಡರ್ ಕರೆಯಲು ಸೂಚಿಸಲಾಗಿದೆ.

‘ಬೃಹತ್ ಮೈಸೂರು ಮಹಾನಗರ ಪಾಲಿಕೆ’ ಘೋಷಣೆ

​ಸಾಂಸ್ಕೃತಿಕ ನಗರಿ ಮೈಸೂರು ಇನ್ನು ಮುಂದೆ ‘ಬೃಹತ್ ಮೈಸೂರು ಮಹಾನಗರ ಪಾಲಿಕೆ’ಯಾಗಲಿದೆ. ಮೈಸೂರು ನಗರಕ್ಕೆ ಹೊಂದಿಕೊಂಡಿರುವ ಹೊಸ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿ, ಒಟ್ಟಾರೆ ಪ್ರದೇಶವನ್ನು ಬೃಹತ್ ಮಹಾನಗರ ಪಾಲಿಕೆಯೆಂದು ಘೋಷಿಸಲು ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.

ರಾಣಿ ಚನ್ನಮ್ಮ ವಿವಿ ಇನ್ನುಮುಂದೆ ‘ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ’

​ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೆಸರನ್ನು ಬದಲಾಯಿಸಲು ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ಈ ವಿವಿಯನ್ನು ‘ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ’ ಎಂದು ಕರೆಯಲಾಗುವುದು. ಇದಕ್ಕಾಗಿ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಅನುಮೋದನೆ ನೀಡಿದೆ.

15 ವರ್ಷಗಳ ನಂತರ ರಾಜ್ಯದ ಕಿರು ಬಂದರುಗಳಿಂದ ಅದಿರು ರಫ್ತಿಗೆ ಅನುಮತಿ

​ರಾಜ್ಯದ 10 ಕಿರು ಬಂದರುಗಳಿಂದ ಕಬ್ಬಿಣದ ಅದಿರು ರಫ್ತು ಮಾಡುವುದನ್ನು ನಿಷೇಧಿಸಿ 2010ರಲ್ಲಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು ಸಂಪುಟ ನಿರ್ಧರಿಸಿದೆ. ಇದರ ಬದಲಾಗಿ ‘ಕರ್ನಾಟಕ ಕಿರು ಬಂದರುಗಳಲ್ಲಿ ಕಬ್ಬಿಣದ ಅದಿರು ನಿರ್ವಹಣಾ ನೀತಿ-2025’ ಅನ್ನು ಜಾರಿಗೆ ತರಲಿದ್ದು, ಹೊಸ ಮಾರ್ಗಸೂಚಿಗಳನ್ವಯ ಅದಿರು ವಹಿವಾಟಿಗೆ ಅವಕಾಶ ನೀಡಲಾಗಿದೆ.

ಗ್ರೇಟರ್ ಬೆಂಗಳೂರು ಕಸ ವಿಲೇವಾರಿಗೆ 100 ಕೋಟಿ ರೂ.

​ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿನ ತ್ಯಾಜ್ಯ ವಿಲೇವಾರಿ ತಾಣಗಳ (Landfill sites) ನಿರ್ವಹಣೆಗೆ 100 ಕೋಟಿ ರೂ.ಗಳ ಯೋಜನೆಗೆ ಒಪ್ಪಿಗೆ ಸಿಕ್ಕಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ಮೂಲಕ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

ವಾಯುವ್ಯ ಸಾರಿಗೆ: 1000 ಚಾಲಕರ ನೇಮಕಾತಿಗೆ ಹಸಿರು ನಿಶಾನೆ

​ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಚಾಲಕರ ಹುದ್ದೆಗಳ ಭರ್ತಿಗೆ ಎದುರಾಗಿದ್ದ ಅಡೆತಡೆ ನಿವಾರಣೆಯಾಗಿದೆ. 2019ರ ಜಾಹೀರಾತಿನನ್ವಯ 1000 ಚಾಲಕರ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಲು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಸಂಪುಟ ಅನುಮೋದನೆ ನೀಡಿದೆ.

ಇತರೆ ಪ್ರಮುಖ ನಿರ್ಧಾರಗಳು:

ದಾಂಡೇಲಿ ಪ್ರಜಾಸೌಧ: ದಾಂಡೇಲಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರಜಾಸೌಧ ಕಟ್ಟಡಕ್ಕೆ ಜಿಎಸ್‌ಟಿ ಏರಿಕೆ ಹಿನ್ನೆಲೆಯಲ್ಲಿ ಪರಿಷ್ಕೃತ 12.49 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ.
ಚಂದ್ರಗುತ್ತಿ ಪ್ರಾಧಿಕಾರ: ಶಿವಮೊಗ್ಗದ ಚಂದ್ರಗುತ್ತಿ ಶ್ರೀ ರೇಣುಕಾಂಬಾ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮಸೂದೆ ಮಂಡನೆ.
ಗಂಗಾವತಿ ಬಸ್ ನಿಲ್ದಾಣ: ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ 17.50 ಕೋಟಿ ರೂ. ವೆಚ್ಚದಲ್ಲಿ ನೂತನ ಸ್ಯಾಟ್‌ಲೈಟ್ ಬಸ್ ನಿಲ್ದಾಣ ನಿರ್ಮಾಣ.
ಕಲಬುರಗಿ ಕೃಷಿ ಕೇಂದ್ರ: ಕಲಬುರಗಿಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಕೃಷಿ ಉತ್ಕೃಷ್ಟತಾ ಕೇಂದ್ರ (CoE) ಸ್ಥಾಪನೆ.
ಕಾಂಗ್ರೆಸ್ ಭವನಕ್ಕೆ ಜಮೀನು: ಬೆಳಗಾವಿಯ ಹಿಂಡಲಗಾದಲ್ಲಿ 1 ಎಕರೆ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು.