ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವ ಉದ್ದೇಶದಿಂದ ಬೆಳ್ಳಂದೂರಿನ ಇಕೋವರ್ಲ್ಡ್ ಆವರಣದ ‘ದ ಬೇ’ನಲ್ಲಿ ಅಕ್ಟೋಬರ್ 25ರಂದು ಆಯೋಜಿಸಲಾಗಿದ್ದ ‘ಸಂಡೆ ಸೋಲ್ ಸಂತೆ’ (Sunday Soul Sante) ಮೇಳಕ್ಕೆ ಬೆಂಗಳೂರಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಬ್ಬದ ಶಾಪಿಂಗ್, ರುಚಿಯಾದ ತಿನಿಸುಗಳು ಹಾಗೂ ಸಂಗೀತ ಕಾರ್ಯಕ್ರಮಗಳು ವಾರಾಂತ್ಯದಲ್ಲಿ ನೆರೆದಿದ್ದವರಿಗೆ ಅತ್ಯುತ್ತಮ ಸಾಂಸ್ಕೃತಿಕ ಅನುಭವ ನೀಡುವಲ್ಲಿ ಯಶಸ್ವಿಯಾದವು.
200ಕ್ಕೂ ಅಧಿಕ ಮಳಿಗೆಗಳ ಪ್ರದರ್ಶನ:
ಮೇಳದಲ್ಲಿ ಸಂಪೂರ್ಣವಾಗಿ ಸ್ವತಂತ್ರ ವಿನ್ಯಾಸಕರು ಹಾಗೂ ದೇಶಿ ಬ್ರ್ಯಾಂಡ್ಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, 200ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿತ್ತು. ಹಬ್ಬಕ್ಕೆ ಬೇಕಾದ ವಿಶೇಷ ಫ್ಯಾಷನ್ ಉಡುಪುಗಳು, ಆಕರ್ಷಕ ಆಭರಣಗಳು, ಗೃಹಾಲಂಕಾರ ವಸ್ತುಗಳು, ಕರಕುಶಲ ಕಲೆಗಳು ಹಾಗೂ ಉಡುಗೊರೆಗಳ ಪ್ರದರ್ಶನ ಮತ್ತು ಮಾರಾಟ ಗ್ರಾಹಕರ ಗಮನ ಸೆಳೆಯಿತು. ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗದಂತಹ ವಿಭಿನ್ನ ಹಾಗೂ ಸ್ಥಳೀಯ ಉತ್ಪನ್ನಗಳು ಇಲ್ಲಿ ಲಭ್ಯವಿದ್ದವು.
ಸ್ಟಾರ್ಟ್ಅಪ್ಗಳಿಗೆ ‘ಹಾರ್ಟ್ ಆಫ್ ಸಂತೆ’ ವೇದಿಕೆ:
ಹೊಸದಾಗಿ ಮಾರುಕಟ್ಟೆಗೆ ಕಾಲಿಡುತ್ತಿರುವ ಸಣ್ಣ ವ್ಯಾಪಾರಿಗಳು, ಸ್ಟಾರ್ಟ್ಅಪ್ಗಳು ಹಾಗೂ ಯುವ ಸೃಜನಶೀಲ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ‘ಹಾರ್ಟ್ ಆಫ್ ಸಂತೆ’ (Heart of Sante) ಎಂಬ ವಿಶೇಷ ಉಪಕ್ರಮವನ್ನು ರೂಪಿಸಲಾಗಿತ್ತು. ಇದರಿಂದ ಉದಯೋನ್ಮುಖ ಉದ್ಯಮಿಗಳಿಗೆ ಜನಪ್ರಿಯ ಬ್ರ್ಯಾಂಡ್ಗಳ ಜೊತೆಗೆ ಸ್ಪರ್ಧಾತ್ಮಕವಾಗಿ ಬೆಳೆಯಲು ಹಾಗೂ ಗ್ರಾಹಕರೊಂದಿಗೆ ನೇರವಾಗಿ ಬೆರೆಯಲು ಉತ್ತಮ ವೇದಿಕೆ ಒದಗಿಸಿದಂತಾಯಿತು.
ಮನರಂಜನೆ ಮತ್ತು ‘ಪೆಟ್ ಜೋನ್’:
ಮೇಳವು ಕೇವಲ ವ್ಯಾಪಾರ-ವಹಿವಾಟಿಗೆ ಸೀಮಿತವಾಗದೆ, ಎಲ್ಲ ವಯಸ್ಸಿನವರಿಗೂ ಮನರಂಜನೆ ಒದಗಿಸಿತು. ಮಕ್ಕಳಿಗಾಗಿ ಆಟಗಳು, ಕೌಶಲ ಕಾರ್ಯಾಗಾರಗಳು ಹಾಗೂ ಸಾಕುಪ್ರಾಣಿಗಳೊಂದಿಗೆ ಆಗಮಿಸುವವರಿಗಾಗಿ ಪ್ರತ್ಯೇಕ ‘ಪೆಟ್ ಜೋನ್’ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ವೇಳೆಗೆ ‘ಕರಿ’ ಮ್ಯೂಸಿಕ್ ಬ್ಯಾಂಡ್ ಹಾಗೂ ‘ವಾಕಿಂಗ್ ವಯೋಲಿನಿಸ್ಟ್’ ಎಂದೇ ಖ್ಯಾತಿ ಪಡೆದಿರುವ ಪಿಟೀಲು ವಾದಕ ಅನೀಶ್ ವಿದ್ಯಾಶಂಕರ್ ಅವರ ಲೈವ್ ಸಂಗೀತ ಕಾರ್ಯಕ್ರಮ ಮೇಳಕ್ಕೆ ಮತ್ತಷ್ಟು ಮೆರುಗು ನೀಡಿತು.
