S Shorts

IPS ಅಧಿಕಾರಿ ಶ್ರೀನಾಥ್ ಜೋಶಿಗೆ ‘ಸುಪ್ರೀಂ’ ಶಾಕ್: ನಿರೀಕ್ಷಣಾ ಜಾಮೀನು ರದ್ದು, 3 ವಾರದಲ್ಲಿ ಶರಣಾಗತಿಗೆ ಸೂಚನೆ!

IPS ಅಧಿಕಾರಿ ಶ್ರೀನಾಥ್ ಜೋಶಿಗೆ ‘ಸುಪ್ರೀಂ’ ಶಾಕ್: ನಿರೀಕ್ಷಣಾ ಜಾಮೀನು ರದ್ದು, 3 ವಾರದಲ್ಲಿ ಶರಣಾಗತಿಗೆ ಸೂಚನೆ!
Author: Sagaradventure
Posted By: Sagaradventure
Updated: Oct 29, 2026 | 4:16 PM

ನವದೆಹಲಿ: ಅಬಕಾರಿ ಅಧಿಕಾರಿಗಳಿಂದ ಸುಲಿಗೆ ಮಾಡಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಶಿ ಅವರಿಗೆ ಸುಪ್ರೀಂಕೋರ್ಟ್ ಭಾರಿ ಮುಖಭಂಗ ಉಂಟುಮಾಡಿದೆ. ಈ ಪ್ರಕರಣದಲ್ಲಿ ಅವರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು (Anticipatory Bail) ಸರ್ವೋಚ್ಚ ನ್ಯಾಯಾಲಯ ರದ್ದುಪಡಿಸಿದ್ದು, ಮುಂದಿನ 3 ವಾರಗಳೊಳಗೆ ಶರಣಾಗುವಂತೆ ಖಡಕ್ ಸೂಚನೆ ನೀಡಿದೆ.

ಲೋಕಾಯುಕ್ತ ಮೇಲ್ಮನವಿಗೆ ಜಯ: 

ಈ ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿರುವ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಶಿ ಅವರಿಗೆ ಈ ಹಿಂದೆ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಲೋಕಾಯುಕ್ತ ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಿ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠವು, ಹೈಕೋರ್ಟ್ ಆದೇಶವನ್ನು ವಜಾಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

ಉನ್ನತ ಸ್ಥಾನದಲ್ಲಿರುವವರಿಂದ ಇಂಥ ಕೃತ್ಯ ಅಕ್ಷಮ್ಯ: 

ವಿಚಾರಣೆ ವೇಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠವು, “ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಇಂತಹ ಸುಲಿಗೆಯಂತಹ ಕೃತ್ಯಗಳಲ್ಲಿ ಭಾಗಿಯಾಗುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ” ಎಂದು ಕಟುವಾಗಿ ಅಭಿಪ್ರಾಯಪಟ್ಟಿದೆ. ಕಾನೂನು ರಕ್ಷಿಸಬೇಕಾದ ಜವಾಬ್ದಾರಿಯುತ ಹುದ್ದೆಯಲ್ಲಿರುವವರೇ ಇಂತಹ ಅಪರಾಧವೆಸಗಿರುವುದು ಗಂಭೀರ ವಿಚಾರ ಎಂದು ಅಸಮಾಧಾನ ಹೊರಹಾಕಿರುವ ನ್ಯಾಯಾಲಯ, ತಕ್ಷಣವೇ ಶರಣಾಗುವಂತೆ ನಿರ್ದೇಶನ ನೀಡಿದೆ. ಆ ಮೂಲಕ ಅಧಿಕಾರಿಗೆ ಬಿಗ್ ಶಾಕ್ ನೀಡಿದೆ.