ವಂದೇ ಮಾತರಂ ಗಾಯನವನ್ನು ಕಡ್ಡಾಯಗೊಳಿಸಿರುವ ನಿಯಮ ಹಾಗೂ ಅದನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಆತ್ಮಸಾಕ್ಷಿಯ ಆಧಾರದ ಮೇಲೆ ಅಥವಾ ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಯಾರಾದರೂ ವಂದೇ ಮಾತರಂ ಗೀತೆಯನ್ನು ಹಾಡಲು ನಿರಾಕರಿಸಿದರೆ, ಅಂತಹವರ ವಿರುದ್ಧ ಯಾವುದೇ ರೀತಿಯ ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ.
ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನಮಂಡಲ ಅಧಿವೇಶನದಲ್ಲಿ ವಂದೇ ಮಾತರಂ ಗಾಯನದ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆದು ರಾಜಕೀಯ ಸಂಘರ್ಷ ತಾರಕಕ್ಕೇರಿರುವ ಸಂದರ್ಭದಲ್ಲೇ, ದೇಶದ ಅತ್ಯುನ್ನತ ನ್ಯಾಯಾಲಯ ನೀಡಿರುವ ಈ ಸೂಚನೆ ಭಾರೀ ಮಹತ್ವ ಪಡೆದುಕೊಂಡಿದೆ.
ಪ್ರಸಿದ್ಧ ಕರ್ನಾಟಕ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅವರು, ವಂದೇ ಮಾತರಂನ ಎಲ್ಲಾ 6 ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ನಿಯಮಾವಳಿಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2026 ರಲ್ಲಿ ತಿದ್ದುಪಡಿ ಮಾಡಲಾದ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ 1971’ ರ ಸೆಕ್ಷನ್ 3 ಹಾಗೂ ಗೃಹ ಸಚಿವಾಲಯದ ಸುತ್ತೋಲೆಗಳನ್ನು ಅವರು ನ್ಯಾಯಾಲಯದಲ್ಲಿ ಸವಾಲು ಮಾಡಿದ್ದರು.
ತಿದ್ದುಪಡಿ ಮಾಡಲಾದ ಕಾಯ್ದೆಯ ಅಡಿಯಲ್ಲಿ ರಾಷ್ಟ್ರೀಯ ಗೀತೆ ಹಾಡುವುದನ್ನು ತಡೆದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಕಠಿಣ ಅವಕಾಶ ಕಲ್ಪಿಸಲಾಗಿತ್ತು. ವಂದೇ ಮಾತರಂನ ಕೊನೆಯ 4 ಚರಣಗಳು ಭಾರತದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ತರುತ್ತವೆ ಹಾಗೂ ಸಂವಿಧಾನದ 25 ಮತ್ತು 26 ನೇ ವಿಧಿಗಳು ಒದಗಿಸಿರುವ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿವೆ ಎಂಬುದು ಅರ್ಜಿದಾರರ ಪರ ವಾದವಾಗಿತ್ತು.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಬಾಗ್ಚಿ ಅವರು 1986 ರ ಐತಿಹಾಸಿಕ ‘ಬಿಜೋ ಇಮ್ಯಾನುಯೆಲ್ ವಿರುದ್ಧ ಕೇರಳ ರಾಜ್ಯ’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದರು.
ಆ ಪ್ರಕರಣದಲ್ಲಿ ತಮ್ಮ ಧಾರ್ಮಿಕ ನಂಬಿಕೆಗೆ ವ್ಯತಿರಿಕ್ತವೆಂಬ ಕಾರಣಕ್ಕೆ ರಾಷ್ಟ್ರಗೀತೆಯನ್ನು ಬಾಯಲ್ಲಿ ಹಾಡದೆ, ಎದ್ದು ನಿಂತು ಮೌನವಾಗಿ ಗೌರವ ಸೂಚಿಸಿದ್ದ ಶಾಲಾ ಮಕ್ಕಳ ಹಕ್ಕನ್ನು ಸುಪ್ರೀಂ ಕೋರ್ಟ್ ರಕ್ಷಿಸಿತ್ತು. ಅದೇ ಸಂವಿಧಾನಾತ್ಮಕ ತತ್ವ ಹಾಗೂ ಆಶಯಗಳು ಪ್ರಸ್ತುತ ತಿದ್ದುಪಡಿ ನಿಯಮಗಳಿಗೂ ನೇರವಾಗಿ ಅನ್ವಯವಾಗುತ್ತವೆ ಎಂದು ನ್ಯಾಯಪೀಠ ಬಲವಾಗಿ ಪ್ರತಿಪಾದಿಸಿತು.
ವಿಚಾರಣೆಯ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಸ್. ಮುರಳೀಧರ್ ಹಾಗೂ ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಜಾತ್ಯತೀತತೆಯ ವ್ಯಾಪ್ತಿ ಇಷ್ಟೊಂದು ಸಂಕುಚಿತವಾಗಿರಲು ಸಾಧ್ಯವಿಲ್ಲ ಎಂದ ತುಷಾರ್ ಮೆಹ್ತಾ, ಕಾನೂನು ರೂಪಿಸುವ ಪ್ರಕ್ರಿಯೆಯನ್ನು ನಕ್ಸಲೀಯರ ಕಲ್ಪನೆಗೆ ತಕ್ಕಂತೆ ಮಾಡಲು ಆಗುವುದಿಲ್ಲ ಎಂದು ವಾದ ಮಂಡಿಸಿದರು.
ಮೆಹ್ತಾ ಅವರ ಈ ಹೇಳಿಕೆಗೆ ಮುರಳೀಧರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ತಕ್ಷಣವೇ ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಅಂತಿಮವಾಗಿ ಮಧ್ಯಪ್ರವೇಶಿಸಿದ ನ್ಯಾಯಪೀಠವು, ರಾಷ್ಟ್ರೀಯ ಭಾವನೆಗಳನ್ನು ನಿರ್ಧರಿಸುವುದು ಸಂಸತ್ತಿನ ಅಧಿಕಾರ ವ್ಯಾಪ್ತಿಗೆ ಸೇರಿದ್ದಾದರೂ, ನಾಗರಿಕರ ಮೂಲಭೂತ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಆತ್ಮಸಾಕ್ಷಿಯ ಹಕ್ಕುಗಳ ರಕ್ಷಣೆಗೆ ನ್ಯಾಯಾಂಗ ಸದಾ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿ ವಿಚಾರಣೆಯನ್ನು ಮುಂದುವರಿಸಿದೆ.
