ದಾವಣಗೆರೆ: ಸಾಮಾನ್ಯವಾಗಿ ಕಳ್ಳರು ಕಳ್ಳತನ ಮಾಡಿದ ಮೇಲೆ ಸುಳಿವು ಸಿಗದಂತೆ ಪರಾರಿಯಾಗುತ್ತಾರೆ. ಆದರೆ ಜಗಳೂರು ತಾಲ್ಲೂಕಿನ ಕೆಳಗೋಟೆ ಗ್ರಾಮದ ಈ ಪಡ್ಡೆ ಹುಡುಗರು ಮಾಡಿದ ಕೆಲಸ ಈಗ ಎಲ್ಲೆಡೆ ನಗುವಿನ ಅಲೆ ಎಬ್ಬಿಸಿದೆ. ಕೋಳಿ ಕಳ್ಳತನ (Chicken Theft) ಮಾಡಿದ್ದಷ್ಟೇ ಅಲ್ಲದೆ, ಅದೇ ಮನೆಯವರ ಅಂಗಡಿಗೆ ಬಂದು ಮಸಾಲೆ ಖರೀದಿಸಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ.
ಘಟನೆಯ ಹಿನ್ನೆಲೆ:
ಕೆಳಗೋಟೆ ಗ್ರಾಮದ ಮಹಿಳೆಯೊಬ್ಬರು ತಮ್ಮ ತವರು ಮನೆಯಿಂದ ಬಳುವಳಿಯಾಗಿ ಬಂದಿದ್ದ ಎರಡು ನಾಟಿ ಕೋಳಿಗಳನ್ನು ಮನೆಯ ಹಿತ್ತಲಿನಲ್ಲಿ ಅಕ್ಕರೆಯಿಂದ ಸಾಕುತ್ತಿದ್ದರು. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿದ್ದ ಮಹಿಳೆ ಗುರುವಾರ ಸಂಜೆ ಹಿತ್ತಲ ಬಾಗಿಲು ಮುಚ್ಚಿ, ತಮ್ಮ ಮನೆಯವರ ಕಿರಾಣಿ ಅಂಗಡಿಯಲ್ಲಿ ವ್ಯಾಪಾರಕ್ಕೆ ಕುಳಿತಿದ್ದರು. ಇದೇ ಸಮಯ ಸಾಧಿಸಿದ ಗ್ರಾಮದ ಕೆಲ ಯುವಕರು ಕಾಂಪೌಂಡ್ ಜಿಗಿದು ಬಂದು ಕೋಳಿಗಳನ್ನು ಅಪಹರಿಸಿದ್ದಾರೆ.
ಕೋಳಿ ಕದ್ದ ಯುವಕರು ಗ್ರಾಮದ ಹೊರವಲಯದಲ್ಲಿ ಬಾಡೂಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಚಿಕನ್ ಬೇಯಿಸಲು ಮಸಾಲೆ (Masala) ಬೇಕೆಂದು ನೆನಪಾದೊಡನೆ, ಸಾಹಸ ಮಾಡಿ ಕೋಳಿ ಕದ್ದ ಅದೇ ಮನೆಯವರ ಕಿರಾಣಿ ಅಂಗಡಿಗೆ ಬಂದು ನಿರ್ಭಯವಾಗಿ ಚಿಕನ್ ಮಸಾಲೆ ಪೌಡರ್ ಖರೀದಿಸಿದ್ದಾರೆ!
ಶುಕ್ರವಾರ ಬೆಳಿಗ್ಗೆ ಶೆಡ್‌ನಲ್ಲಿ ಕೋಳಿಗಳು ಕಾಣದಿದ್ದಾಗ ಮನೆಯ ಮಾಲೀಕ ಮಾರಪ್ಪ ಅವರು ಹುಡುಕಾಟ ನಡೆಸಿದರು. ಆಗ ರಾತ್ರಿ ಅಂಗಡಿಗೆ ಬಂದು ಮಸಾಲೆ ಖರೀದಿಸಿದ್ದ ಹುಡುಗರ ವರ್ತನೆಯ ಮೇಲೆ ಅನುಮಾನ ಬಂದು ವಿಚಾರಿಸಿದಾಗ ಅವರು ನುಣುಚಿಕೊಂಡಿದ್ದರು.
ಅನುಮಾನ ಬಲವಾದ ಹಿನ್ನೆಲೆಯಲ್ಲಿ ಜಗಳೂರು ಪೊಲೀಸರಿಗೆ ದೂರು ನೀಡಲಾಯಿತು. ಪೊಲೀಸರು ಯುವಕರನ್ನು ಠಾಣೆಗೆ ಕರೆಸಿ ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಸಂಕ್ರಾಂತಿ ಹಬ್ಬದಂದು ಚಿಕನ್ ಸಾಂಬಾರ್ ಮತ್ತು ಮುದ್ದೆ ಸವಿಯಲು ಕೋಳಿ ಕದ್ದಿರುವುದಾಗಿ ಕಳ್ಳರು ಬಾಯ್ಬಿಟ್ಟಿದ್ದಾರೆ.
ಜನರೆಲ್ಲಾ ಎಳ್ಳು-ಬೆಲ್ಲ ತಿಂದು ಸಂಕ್ರಾಂತಿ ಆಚರಿಸಿದರೆ, ಈ ‘ಕಿಲಾಡಿ’ ಕಳ್ಳರು ಮಾತ್ರ ಚಿಕನ್ ಸಾಂಬಾರ್ (Chicken Sambar) ಉಂಡು ಜೈಲು ಪಾಲಾಗಿದ್ದಾರೆ.
