ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದ ಕೇವಲ 2 ವರ್ಷ 10 ತಿಂಗಳ ಪುಟ್ಟ ಬಾಲಕಿ ಸ್ವರಶ್ರೀ ಹೆಗಡೆ, ‘ಅತ್ಯಂತ ಕಿರಿಯ ತಬಲಾ ಕಲಾವಿದೆ’ (Youngest Tabla Player) ಎಂಬ ಹೆಗ್ಗಳಿಕೆಯೊಂದಿಗೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ (India Book of Records) ದಾಖಲೆ ಬರೆದಿದ್ದಾಳೆ. 12 ತಾಳಗಳನ್ನು ಅವುಗಳ ‘ಬೋಲ್’ ಹೇಳುತ್ತಾ ಯಾವುದೇ ತಪ್ಪಿಲ್ಲದೇ ತಬಲಾ ನುಡಿಸುವ ಮೂಲಕ ಈ ಪುಟಾಣಿ ನೋಡುಗರನ್ನು ವಿಸ್ಮಯಗೊಳಿಸುತ್ತಾಳೆ.
ಸಂಗೀತಮಯ ಕೌಟುಂಬಿಕ ಹಿನ್ನೆಲೆ:
ಸ್ವರಶ್ರೀ ಖ್ಯಾತ ತಬಲಾವಾದಕ ಗುರುರಾಜ ಹೆಗಡೆ ಆಡುಕಳ ಹಾಗೂ ಇಂಗ್ಲೀಷ್ ಪ್ರಾಧ್ಯಾಪಕಿ ಮತ್ತು ಹಿಂದೂಸ್ಥಾನಿ ಗಾಯಕಿ ಶ್ರೀಲತಾ ಅವರ ಪುತ್ರಿ. ಗುರುರಾಜ ಹೆಗಡೆ ಅವರು ವಿದ್ವಾನ್ ಶೇಷಾದ್ರಿ ಅಯ್ಯಂಗಾರ್ ಅವರ ಶಿಷ್ಯರಾಗಿದ್ದು, ದೇಶದ ಪ್ರಮುಖ ವೇದಿಕೆಗಳಲ್ಲಿ ಹಿರಿಯ ಸಂಗೀತಗಾರರಿಗೆ ಸಾಥ್ ನೀಡುವ ಜೊತೆಗೆ 50ಕ್ಕೂ ಹೆಚ್ಚು ಶಿಷ್ಯರಿಗೆ ತರಬೇತಿ ನೀಡುತ್ತಿದ್ದಾರೆ. ತಾಯಿ ಶ್ರೀಲತಾ ಅವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ‘ವಿದ್ವತ್’ ಪಡೆದಿದ್ದು, ಇವರಿಬ್ಬರೂ ಹೊನ್ನಾವರದಲ್ಲಿ ಸಂಗೀತ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ.

ಆಸಕ್ತಿಗೆ ಪೋಷಕರ ಪ್ರೋತ್ಸಾಹ:
ಸಂಗೀತಮಯ ವಾತಾವರಣದಲ್ಲಿ ಬೆಳೆದ ಸ್ವರಶ್ರೀಗೆ ಕೇವಲ 12-14 ತಿಂಗಳಿದ್ದಾಗಲೇ ತಬಲಾದ ಮೇಲೆ ಆಸಕ್ತಿ ಮೂಡಿತ್ತು. ಒಂದು ವರ್ಷ ಕಳೆದಾಗಲೇ ತಬಲಾ ಮೇಲೆ ಕೈಯಾಡಿಸುತ್ತಾ ಅದರ ಮೇಲೆಯೇ ನಿದ್ರಿಸುತ್ತಿದ್ದ ಮಗುವಿನ ಆಸಕ್ತಿ ಗಮನಿಸಿದ ಪೋಷಕರು ಅವಳಿಗಾಗಿಯೇ ಎರಡು ಪುಟ್ಟ ತಬಲಾಗಳನ್ನು ಮಾಡಿಸಿಕೊಟ್ಟಿದ್ದರು.
ತಂದೆ ತನ್ನ ಶಿಷ್ಯರಿಗೆ ಪಾಠ ಮಾಡುವಾಗಲೆಲ್ಲಾ ಜೊತೆಗೆ ಕೂರುತ್ತಿದ್ದ ಮಗಳಿಗೆ, 12 ತಾಳಗಳನ್ನು ಬೋಲ್ ಸಹಿತ ಕಲಿಸಲಾಗಿದೆ. ಇದೀಗ ಈ ಕಿರಿಯ ವಯಸ್ಸಿನಲ್ಲೇ ಸ್ವರಶ್ರೀ ಮಾಡಿರುವ ಅಸಾಧಾರಣ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
