ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸ್ಥಗಿತಗೊಂಡಿದ್ದ ಟೋಯಿಂಗ್ (Towing) ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ( Former Home Minister Araga)ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವ್ಯವಸ್ಥೆಯು ಕೇವಲ ‘ವಸೂಲಿ ಮಾಫಿಯಾ’ ಆಗಿ ಬದಲಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
2022ರಲ್ಲಿ ಟೋಯಿಂಗ್ ಮಾಫಿಯಾದಿಂದಾಗಿ ಜನರು ಸಾಕಷ್ಟು ಅಪಮಾನ ಮತ್ತು ಅಮಾನುಷ ವರ್ತನೆ ಅನುಭವಿಸಿದ್ದರು. ಅಂದು ಸಾರ್ವಜನಿಕರ ಹಿತದೃಷ್ಟಿಯಿಂದಲೇ ನಾವು ಈ ವ್ಯವಸ್ಥೆಯನ್ನು ರದ್ದು ಮಾಡಿದ್ದೆವು. ಹಿಂದಿನ ವರದಿಗಳ ಪ್ರಕಾರ, ಪೊಲೀಸ್ ಅಧಿಕಾರಿಗಳೇ ಅಪ್ರತ್ಯಕ್ಷವಾಗಿ ಟೋಯಿಂಗ್ ಟೆಂಡರ್ ಪಡೆದಿದ್ದರು. ಕಂಟ್ರ್ಯಾಕ್ಟರ್‌ಗಳು ಪೊಲೀಸ್ ಠಾಣೆಗಳಿಗೆ ಲಕ್ಷಗಟ್ಟಲೆ ‘ಮಾಮೂಲಿ’ ಕೊಡಬೇಕಾದ ಸ್ಥಿತಿ ಇತ್ತು. ಸರ್ಕಾರದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಅದನ್ನು ಸರಿದೂಗಿಸಲು ದಂಡವನ್ನೇ ಆದಾಯದ ಮೂಲವನ್ನಾಗಿ ಮಾಡಿಕೊಳ್ಳಲಾಗಿದೆ. 112 ವಾಹನಗಳು ರಸ್ತೆಯಲ್ಲಿ ದರೋಡೆಕೋರರಂತೆ ವರ್ತಿಸುತ್ತಿವೆ ಎಂದು ಅರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.
ಜನರಿಗೆ ಹಿಂಸೆ ಮತ್ತು ಅಪಮಾನ ಮಾಡಿ ಸರ್ಕಾರದ ಖಜಾನೆ ತುಂಬಿಸಿಕೊಳ್ಳುವುದು ನಾಗರಿಕ ಸರ್ಕಾರದ ಲಕ್ಷಣವಲ್ಲ. ಸರ್ಕಾರ ತನ್ನ ಆರ್ಥಿಕ ದುಸ್ಥಿತಿ ಸರಿಪಡಿಸಲು ಬೇರೆ ಮಾರ್ಗಗಳನ್ನು ಹುಡುಕಿಕೊಳ್ಳಲಿ. ಟೋಯಿಂಗ್ ಮಾಫಿಯಾ ಕೈಗೆ ಬೆಂಗಳೂರು ಜನರನ್ನು ಮತ್ತೆ ಒಪ್ಪಿಸಲು ಸರ್ಕಾರ ಹೊರಟಿದೆ ಎಂಬ ಕಲ್ಪನೆಯೇ ಭಯ ಹುಟ್ಟಿಸುತ್ತದೆ. ಈ ಜನವಿರೋಧಿ ನೀತಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಮಾಜಿ ಗೃಹ ಸಚಿವರು ಹೇಳಿದ್ದಾರೆ.
