ರಾಯಚೂರು: ಶಾಲೆಯ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಐದನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಬಲಿಯಾದ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕುರುಕುಂದಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (Government School)ನಡೆದಿದೆ.
ಘಟನೆಯ ವಿವರ:
ಮಧ್ಯಾಹ್ನದ ಬಿಸಿಯೂಟದ ಸಮಯದಲ್ಲಿ 11 ವರ್ಷದ ವಿದ್ಯಾರ್ಥಿನಿ ತನುಶ್ರೀ ಶ್ಯಾಮಣ್ಣ ಭಜಂತ್ರಿ ಶಾಲಾ ಆವರಣದಲ್ಲಿದ್ದ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ನೀರು ತರಲು ಹೋಗಿದ್ದಳು. ಈ ಶುದ್ಧೀಕರಣ ಘಟಕಕ್ಕೆ ಸಂಪರ್ಕ ಕಲ್ಪಿಸಲು ಹಾಕಲಾಗಿದ್ದ ವಿದ್ಯುತ್ ವೈಯರ್‌ನಿಂದ ಕರೆಂಟ್ ಶಾಕ್ (Electric Shock) ಹೊಡೆದಿದೆ. ಪರಿಣಾಮ ಬಾಲಕಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸಿಂಧನೂರು ಬಿಇಒ (BEO) ಬಸವಲಿಂಗಪ್ಪ ಪವಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಂಬಂಧಪಟ್ಟ ಸಿಬ್ಬಂದಿಯ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಬಿಇಒ, ಕೂಡಲೇ ಅವರ ಅಮಾನತಿಗೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.
ಮೃತ ಬಾಲಕಿಯ ಕುಟುಂಬಕ್ಕೆ ಶಿಕ್ಷಕರ ಕಲ್ಯಾಣ ನಿಧಿ (SWF) ವತಿಯಿಂದ 2 ಲಕ್ಷ ರೂಪಾಯಿಗಳ ತಾತ್ಕಾಲಿಕ ಪರಿಹಾರವನ್ನು ಘೋಷಿಸಲಾಗಿದೆ.
ಶಾಲೆಯ ಆವರಣದಲ್ಲಿ ವಿದ್ಯುತ್ ವೈಯರ್ ಹೋಗಿದ್ದರೂ ಅದರ ಬಗ್ಗೆ ಮುನ್ನೆಚ್ಚರಿಕೆ ವಹಿಸದ ಶಾಲಾ ಆಡಳಿತ ಮಂಡಳಿ ಮತ್ತು ಎಸ್‌ಡಿಎಂಸಿ (SDMC) ವಿರುದ್ಧ ಪೋಷಕರು ಮತ್ತು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
