S Shorts

SIR ಕರ್ತವ್ಯಕ್ಕೆ ತೆರಳುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಅಪರಿಚಿತ ವಾಹನ ಡಿಕ್ಕಿ, ಗಂಭೀರ ಗಾಯ

SIR ಕರ್ತವ್ಯಕ್ಕೆ ತೆರಳುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಅಪರಿಚಿತ ವಾಹನ ಡಿಕ್ಕಿ, ಗಂಭೀರ ಗಾಯ
Author: Sagaradventure
Posted By: Sagaradventure
Updated: Jul 4, 2026 | 11:40 AM

ತುಮಕೂರು ತಾಲೂಕಿನ ಗೂಳೂರು ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗ್ರಾಮ ಲೆಕ್ಕಾಧಿಕಾರಿಯೊಬ್ಬರು (VAO) ಗಂಭೀರವಾಗಿ ಗಾಯಗೊಂಡಿದ್ದಾರೆ. ತುಮಕೂರು ತಾಲೂಕಿನ ಹುಳ್ಳೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ 26 ವರ್ಷದ ಭುವನಾ ಅವರೇ ಅಪಘಾತದಲ್ಲಿ ಗಾಯಗೊಂಡ ದುರ್ದೈವಿ. ಶನಿವಾರ ಬೆಳಿಗ್ಗೆ ಅವರು ಎಸ್‌ಐಆರ್ (SIR) ಕಾರ್ಯನಿರ್ವಹಿಸಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅತಿವೇಗವಾಗಿ ಬಂದ ಅಪರಿಚಿತ ವಾಹನವೊಂದು ಭುವನಾ ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.

ಸಿದ್ದಗಂಗಾ ಆಸ್ಪತ್ರೆಯಲ್ಲಿ ತೀವ್ರ ನಿಗಾ

​ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಭುವನಾ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ತ ಸ್ರಾವವಾಗುತ್ತಿದ್ದ ಅವರನ್ನು ತಕ್ಷಣವೇ ರಕ್ಷಿಸಿ ತುಮಕೂರು ನಗರದಲ್ಲಿರುವ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ತುರ್ತು ಚಿಕಿತ್ಸೆ ಮುಂದುವರಿದಿದೆ.

ಜಿಲ್ಲಾಧಿಕಾರಿಗಳ ಕಾರ್ಯದೊತ್ತಡವೇ ಕಾರಣ: ಕುಟುಂಬಸ್ಥರ ಆರೋಪ

​ಈ ಘಟನೆಗೆ ಸಂಬಂಧಿಸಿದಂತೆ ಭುವನಾ ಅವರ ಕುಟುಂಬಸ್ಥರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ನೀಡುತ್ತಿರುವ ತೀವ್ರ ಕಾರ್ಯದೊತ್ತಡ ಹಾಗೂ ಟಾರ್ಗೆಟ್ ಪೂರ್ಣಗೊಳಿಸುವ ಒತ್ತಡದಿಂದಾಗಿಯೇ ಈ ಅಪಘಾತ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಸದ ಒತ್ತಡದಲ್ಲಿಯೇ ಬೆಳ್ಳಂಬೆಳಿಗ್ಗೆ ಕರ್ತವ್ಯಕ್ಕೆ ತೆರಳುವಾಗ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಸ್ಥಳಕ್ಕೆ ಪೊಲೀಸರ ಭೇಟಿ ಹಾಗೂ ಪರಿಶೀಲನೆ

​ಅಪಘಾತದ ವಿಷಯ ತಿಳಿಯುತ್ತಿದ್ದಂತೆಯೇ ತುಮಕೂರು ಗ್ರಾಮಾಂತರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಕ್ಕಿ ಹೊಡೆದು ಪರಾರಿಯಾಗಿರುವ ಅಪರಿಚಿತ ವಾಹನದ ಪತ್ತೆಗಾಗಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.