ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಬಿಚ್ವಾನ್ ಪ್ರದೇಶದ ದೇವಗಂಜ್ ಗ್ರಾಮದ ಕೃಷಿಕ ಕುಟುಂಬವೊಂದರಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ರೈತ ಪರಸ್ಭಾನ್ ಬಹೇಲಿಯಾ ಅವರ ಪತ್ನಿ ರೀಟಾ ಅವರ ಬ್ಯಾಂಕ್ ಖಾತೆಯಲ್ಲಿ ನಿಗೂಢವಾಗಿ ಬರೋಬ್ಬರಿ 10 ಕೋಟಿ ರೂಪಾಯಿ ಪತ್ತೆಯಾಗಿದೆ. ಇಷ್ಟೊಂದು ದೊಡ್ಡ ಮೊತ್ತ ಖಾತೆಯಲ್ಲಿದ್ದರೂ, ಈ ವಿಚಾರ ಇತ್ಯರ್ಥವಾಗುವವರೆಗೆ ಅದರಲ್ಲಿನ ಒಂದು ರೂಪಾಯಿಯನ್ನು ಸಹ ತಾವು ಹಿಂಪಡೆಯುವುದಿಲ್ಲ ಎಂದು ನಿರಾಕರಿಸುವ ಮೂಲಕ ಈ ಮಹಿಳೆ ಎಲ್ಲರ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನವರಾತ್ರಿಯ ಅಷ್ಟಮಿಯ ಸಂದರ್ಭದಲ್ಲಿ ರೀಟಾ ಅವರು ಹಣ ಪಡೆಯಲು ತಮ್ಮ ಸ್ಥಳೀಯ ಬ್ಯಾಂಕ್‌ಗೆ ತೆರಳಿದ್ದರು. ಆದರೆ ಅಂದು ರಜೆ ಇದ್ದ ಕಾರಣ ಬ್ಯಾಂಕ್ ಮುಚ್ಚಿತ್ತು. ಹೀಗಾಗಿ ಅವರು ಹಣ ಡ್ರಾ ಮಾಡಲು ಹತ್ತಿರದ ಎಟಿಎಂಗೆ ಹೋಗಿ ತಮ್ಮ ಅಕೌಂಟ್ ಬ್ಯಾಲೆನ್ಸ್ ಪರಿಶೀಲಿಸಿದಾಗ ಅಕ್ಷರಶಃ ದಿಗ್ಭ್ರಮೆಗೊಂಡಿದ್ದಾರೆ. ಬ್ಯಾಂಕ್ ಆಫ್ ಇಂಡಿಯಾದಲ್ಲಿನ ಅವರ ಖಾತೆಯಲ್ಲಿ 9,99,49,588 ರೂ. ಬ್ಯಾಲೆನ್ಸ್ ತೋರಿಸುತ್ತಿತ್ತು! ತಮ್ಮ ಕಣ್ಣುಗಳನ್ನು ತಾವೇ ನಂಬಲಾಗದೆ ಅವರು ಮತ್ತೊಂದು ಎಟಿಎಂಗೆ ತೆರಳಿ ಎರಡನೇ ಬಾರಿಗೆ ಬ್ಯಾಲೆನ್ಸ್ ಪರಿಶೀಲಿಸಿದ್ದಾರೆ. ಈ ವೇಳೆ ಎಟಿಎಂ ಪರದೆಯಲ್ಲಿದ್ದ ಮೊತ್ತದ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದ್ದು, ಅದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ತಮ್ಮ ಖಾತೆಯಲ್ಲಿ ಇಷ್ಟೊಂದು ಅಪಾರ ಮೊತ್ತ ತೋರಿಸುತ್ತಿದ್ದರೂ, ರೀಟಾ ಅವರು ಅದರಿಂದ ಯಾವುದೇ ಹಣವನ್ನು ಪಡೆಯಲು ಮುಂದಾಗಲಿಲ್ಲ. ಪರಿಸ್ಥಿತಿಯ ಹಿಂದಿನ ನೈಜ ಕಾರಣ ತಿಳಿಯುವವರೆಗೆ ಆ ಹಣವನ್ನು ಯಾರೂ ಮುಟ್ಟಬಾರದು ಎಂದು ಅವರು ತಮ್ಮ ಕುಟುಂಬ ಸದಸ್ಯರಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಈ ವಿಷಯವನ್ನು ತಿಳಿಸಲು ಬ್ಯಾಂಕಿಗೆ ಹೋದಾಗ ಸಾರ್ವಜನಿಕ ರಜೆಯ ಕಾರಣ ಶಾಖೆ ಮುಚ್ಚಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಕ್ ಆಫ್ ಇಂಡಿಯಾದ ಕರೀಮ್‌ಗಂಜ್ ಶಾಖೆಯ ವ್ಯವಸ್ಥಾಪಕ ರಿಷಿಕಾಂತ್ ಪಾಂಡೆ, ಇದು ತಾಂತ್ರಿಕ ದೋಷ ಅಥವಾ ವಹಿವಾಟಿನ ದೋಷದಿಂದಾಗಿ ಆಗಿರುವ ಸಾಧ್ಯತೆಯಿದೆ, ಬ್ಯಾಂಕ್ ತೆರೆದ ಬಳಿಕ ಈ ಬಗ್ಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ. ಕೋಟಿಗಟ್ಟಲೆ ಹಣವನ್ನು ದುರುಪಯೋಗಪಡಿಸಿಕೊಳ್ಳಲು ಎಲ್ಲಾ ಅವಕಾಶವಿದ್ದರೂ ಪ್ರಾಮಾಣಿಕತೆ ಮೆರೆದ ರೀಟಾ ಅವರ ನಡೆಯನ್ನು ನೆರೆಹೊರೆಯವರು ಹಾಗೂ ನೆಟ್ಟಿಗರು ಮುಕ್ತಕಂಠದಿಂದ ಕೊಂಡಾಡುತ್ತಿದ್ದಾರೆ.
