S Shorts

ಭದ್ರತಾ ಆತಂಕ: ಜಪಾನ್‌ನಲ್ಲಿರುವ ತನ್ನ ಪ್ರಮುಖ ವಾಯುನೆಲೆಯಲ್ಲಿ ಚೀನಾದ ‘BYD’ ವಾಹನಗಳನ್ನು ನಿಷೇಧಿಸಿದ ಅಮೆರಿಕ!

ಭದ್ರತಾ ಆತಂಕ: ಜಪಾನ್‌ನಲ್ಲಿರುವ ತನ್ನ ಪ್ರಮುಖ ವಾಯುನೆಲೆಯಲ್ಲಿ ಚೀನಾದ ‘BYD’ ವಾಹನಗಳನ್ನು ನಿಷೇಧಿಸಿದ ಅಮೆರಿಕ!
Author: Sagaradventure
Posted By: Sagaradventure
Updated: Oct 27, 2026 | 12:30 PM

ಟೋಕಿಯೊ: ಜಪಾನ್‌ನ ಒಕಿನಾವಾ ದ್ವೀಪದಲ್ಲಿರುವ ಅಮೆರಿಕದ ಅತ್ಯಂತ ಪ್ರಮುಖ ಹಾಗೂ ಆಯಕಟ್ಟಿನ ‘ಕಡೆನಾ ವಾಯುನೆಲೆ’ಯಲ್ಲಿ (Kadena Air Base) ಚೀನಾದ ಎಲೆಕ್ಟ್ರಿಕ್ ವಾಹನ ದೈತ್ಯ ‘ಬಿವೈಡಿ’ (BYD) ವಾಹನಗಳ ಬಳಕೆಯನ್ನು ಅಮೆರಿಕದ ಸೇನೆ ನಿಷೇಧಿಸಿದೆ.

ಮಾಹಿತಿ ಸೋರಿಕೆಯ ಆತಂಕ: 

ಆಧುನಿಕ ವಾಹನಗಳಲ್ಲಿ ಅಳವಡಿಸಲಾಗಿರುವ ಕ್ಯಾಮೆರಾ, ಸೆನ್ಸರ್‌ ಹಾಗೂ ಜಿಪಿಎಸ್ (GPS) ವ್ಯವಸ್ಥೆಗಳ ಮೂಲಕ ಸೂಕ್ಷ್ಮ ಹಾಗೂ ರಹಸ್ಯ ಮಾಹಿತಿಗಳು ಸೋರಿಕೆಯಾಗುವ ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂಬರುವ ಸೋಮವಾರದಿಂದಲೇ ಈ ನಿಷೇಧ ಆದೇಶ ಜಾರಿಗೆ ಬರಲಿದೆ ಎಂದು ದಕ್ಷಿಣ ಕೊರಿಯಾದ ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. “ಈ ವಾಹನಗಳು ನಮ್ಮ ಸಿಬ್ಬಂದಿ ಹಾಗೂ ಕಾರ್ಯಾಚರಣೆಗಳಿಗೆ ಒಪ್ಪಲಾಗದ ಮತ್ತು ಸರಿಪಡಿಸಲಾಗದ ಭದ್ರತಾ ಅಪಾಯವನ್ನು ತಂದೊಡ್ಡಲಿವೆ” ಎಂದು ವಾಯುನೆಲೆಯ ವಕ್ತಾರೆ ಲೆಫ್ಟಿನೆಂಟ್ ಕರ್ನಲ್ ಅಲಿ ಸ್ಟಾರ್ಮರ್ ಸ್ಪಷ್ಟಪಡಿಸಿದ್ದಾರೆ.

ಕಡೆನಾ ವಾಯುನೆಲೆಯ ಮಹತ್ವ: 

ಕಡೆನಾ ವಾಯುನೆಲೆಯು ಪೆಸಿಫಿಕ್ ಪ್ರದೇಶದಲ್ಲಿರುವ ಅಮೆರಿಕದ ಅತಿದೊಡ್ಡ ವಾಯುನೆಲೆಯಾಗಿದೆ. ಸುಮಾರು 20,000 ಅಮೆರಿಕನ್ನರು ಇಲ್ಲಿ ನೆಲೆಸಿದ್ದು, 836 ಮಿಲಿಯನ್ ಡಾಲರ್ ಮೌಲ್ಯದ ಯುದ್ಧಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿದೆ. ಚೀನಾ, ರಷ್ಯಾ ಅಥವಾ ಉತ್ತರ ಕೊರಿಯಾದೊಂದಿಗಿನ ಯಾವುದೇ ಸಂಭಾವ್ಯ ಸೇನಾ ಘರ್ಷಣೆಯಲ್ಲಿ ಈ ವಾಯುನೆಲೆ ನಿರ್ಣಾಯಕ ಪಾತ್ರ ವಹಿಸಲಿದೆ. ಇಲ್ಲಿರುವ 1,600 ಕಿ.ಮೀ. ವ್ಯಾಪ್ತಿಯ ಟೈಫೋನ್ ಕ್ಷಿಪಣಿ ವ್ಯವಸ್ಥೆಯು (Typhon missile system) ಚೀನಾ ಹಾಗೂ ರಷ್ಯಾದ ಕೆಲವು ಭಾಗಗಳನ್ನು ತಲುಪುವ ಸಾಮರ್ಥ್ಯ ಹೊಂದಿದೆ.

ಚೀನಾ ಸೇನೆಯೊಂದಿಗೆ ನಂಟು? 

ಕಳೆದ ಜೂನ್‌ನಲ್ಲಿ ಪೆಂಟಗನ್ ಬಿಡುಗಡೆ ಮಾಡಿದ್ದ ಚೀನಾ ಸೇನೆಗೆ ಬೆಂಬಲ ನೀಡುತ್ತಿರುವ ಕಂಪನಿಗಳ ಪಟ್ಟಿಯಲ್ಲಿ ಬಿವೈಡಿ, ಅಲಿಬಾಬಾ ಹಾಗೂ ಬೈದು ಸಂಸ್ಥೆಗಳ ಹೆಸರನ್ನು ಉಲ್ಲೇಖಿಸಲಾಗಿತ್ತು. ಟೆಸ್ಲಾ ಕಂಪನಿಯನ್ನು ಹಿಂದಿಕ್ಕಿ 2025ರಲ್ಲಿ ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನ ಮಾರಾಟಗಾರ ಕಂಪನಿಯಾಗಿ ಹೊರಹೊಮ್ಮಿರುವ ಬಿವೈಡಿ, ಇತ್ತೀಚೆಗಷ್ಟೇ ಜಪಾನ್ ಮಾರುಕಟ್ಟೆಗೂ ಲಗ್ಗೆ ಇಟ್ಟಿತ್ತು. 2021ರಲ್ಲಿ ಇದೇ ರೀತಿಯ ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಚೀನಾ ಕೂಡ ತನ್ನ ಪ್ರಮುಖ ಸರ್ಕಾರಿ ಕಚೇರಿಗಳ ಆವರಣದಲ್ಲಿ ಅಮೆರಿಕದ ‘ಟೆಸ್ಲಾ’ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿತ್ತು. ಇದೀಗ ಅಮೆರಿಕ ಕೂಡ ಚೀನಾದ ವಾಹನಗಳಿಗೆ ಪ್ರತಿಬಂಧಕ ಹೇರಿದೆ.