ರಾಜ್ಯದ ಜಲಸಂಪನ್ಮೂಲ ಇಲಾಖೆಯಲ್ಲಿ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಬೃಹತ್ ಬದಲಾವಣೆ ಮಾಡಲಾಗಿದ್ದು, ಉಳಿಕೆ ಮೂಲ ವೃಂದದ ಸಹಾಯಕ ಇಂಜಿನಿಯರ್‌ಗಳಿಗೆ (ಸಿವಿಲ್ ಮತ್ತು ಮೆಕ್ಯಾನಿಕಲ್) ತಕ್ಷಣದಿಂದ ಜಾರಿಗೆ ಬರುವಂತೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಎಇಇ) ಹುದ್ದೆಯಲ್ಲಿ ಸ್ವತಂತ್ರ ಪ್ರಭಾರ ನೀಡಿ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ ಎಚ್. ಹನುಮಂತೇಗೌಡ ಅವರ ಹೆಸರಿನಲ್ಲಿ ಸೆಪ್ಟೆಂಬರ್ 17 ರಂದು ಈ ಆದೇಶ ಹೊರಬಿದ್ದಿದ್ದು, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ (KCSR) ನಿಯಮ 32 ರ ಅಡಿಯಲ್ಲಿ ಈ ಅಧಿಕಾರಿಗಳಿಗೆ ಉನ್ನತ ಹುದ್ದೆಯ ಜವಾಬ್ದಾರಿ ವಹಿಸಲಾಗಿದೆ.
ಸ್ವತಂತ್ರ ಪ್ರಭಾರ ಪಡೆದಿರುವ ಈ ಅಧಿಕಾರಿಗಳನ್ನು ರಾಜ್ಯದ ವಿವಿಧ ಪ್ರಮುಖ ಇಲಾಖೆಗಳು ಹಾಗೂ ನಿಗಮಗಳಿಗೆ ಸ್ಥಳನಿಯುಕ್ತಿಗೊಳಿಸಿ ಅಥವಾ ನಿಯೋಜನೆ ಮಾಡಿ ಆದೇಶಿಸಲಾಗಿದೆ. ಪ್ರಮುಖವಾಗಿ ಇವರನ್ನು ಕಾವೇರಿ ನೀರಾವರಿ ನಿಗಮ, ಕೃಷ್ಣಾ ಭಾಗ್ಯ ಜಲ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಹಾಗೂ ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗಳಿಗೆ ನಿಯೋಜಿಸಲಾಗಿದೆ.
ವರ್ಗಾವಣೆ ಅಥವಾ ನಿಯೋಜನೆಗೊಂಡ ಅಧಿಕಾರಿಗಳು ತಕ್ಷಣವೇ ತಮ್ಮ ಹೊಸ ಹುದ್ದೆಗಳಲ್ಲಿ ಕಾರ್ಯ ವರದಿ ಮಾಡಿಕೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಇದರಲ್ಲಿ ಯಾವುದೇ ರೀತಿಯ ವಿಳಂಬ ಮಾಡಿದರೆ ಕಠಿಣ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಈ ಸ್ವತಂತ್ರ ಪ್ರಭಾರ ವ್ಯವಸ್ಥೆಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಇದು ಅಧಿಕಾರಿಗಳಿಗೆ ಖಾಯಂ ಮುಂಬಡ್ತಿಯಾಗಲೀ ಅಥವಾ ಜೇಷ್ಠತೆಯ ಹಕ್ಕನ್ನಾಗಲೀ ನೀಡುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ಈ ಆದೇಶವು ಮಾನ್ಯ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ವಿವಿಧ ರಿಟ್ ಅರ್ಜಿಗಳಾದ 23371/2023, 28555/2023, 14022/2022 ಹಾಗೂ 7440/2024 ಗಳ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಉಲ್ಲೇಖಿಸಲಾಗಿದೆ.
ಹೀಗಾಗಿ, ನ್ಯಾಯಾಲಯದ ಅಂತಿಮ ತೀರ್ಪು ಹೊರಬೀಳುವವರೆಗೂ ನಿಯೋಜಿತ ಅಧಿಕಾರಿಗಳು ತಾತ್ಕಾಲಿಕ ನೆಲೆಯಲ್ಲೇ ಎಇಇ ಆಗಿ ಕಾರ್ಯನಿರ್ವಹಿಸಲಿದ್ದಾರೆ.
