S Shorts

ಚಂಡಮಾರುತದ ಪ್ರಭಾವ, 3 ಜಿಲ್ಲೆಗಳಲ್ಲಿ ತುಂತುರು ಮಳೆ; ನ.2 ರಿಂದ ವರ್ಷಧಾರೆ!

ಚಂಡಮಾರುತದ ಪ್ರಭಾವ, 3 ಜಿಲ್ಲೆಗಳಲ್ಲಿ ತುಂತುರು ಮಳೆ; ನ.2 ರಿಂದ ವರ್ಷಧಾರೆ!
Author: Sagaradventure
Posted By: Sagaradventure
Updated: Oct 28, 2026 | 2:32 PM

ಬೆಂಗಳೂರು: ಅಕ್ಟೋಬರ್ 29ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯಂತೆ, ರಾಜ್ಯದ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಚಂಡಮಾರುತದ ಪ್ರಭಾವ ಕಂಡುಬರಲಿದೆ. ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸಂಜೆ ಮತ್ತು ರಾತ್ರಿ ವೇಳೆಗೆ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.

ಚಳಿ ಇಳಿಕೆ, ಕರಾವಳಿಯಲ್ಲಿ ಸೆಖೆ: ಚಂಡಮಾರುತವು ಉತ್ತರ ದಿಕ್ಕಿನತ್ತ ಚಲಿಸುತ್ತಿರುವುದರಿಂದ ಉತ್ತರ ಭಾರತದ ಕಡೆಯಿಂದ ಬೀಸುವ ಶುಷ್ಕ ಗಾಳಿಗೆ ತಡೆಯುಂಟಾಗಿದೆ. ಹೀಗಾಗಿ ರಾಜ್ಯದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗಲಿದೆ. ಕರಾವಳಿ ಜಿಲ್ಲೆಗಳಿಗೆ ಅರಬ್ಬಿ ಸಮುದ್ರದ ಕಡೆಯಿಂದ ಗಾಳಿ ಬೀಸುತ್ತಿರುವುದರಿಂದ ಅಲ್ಲೂ ಕೂಡ ಚಳಿ ಕಡಿಮೆಯಾಗಿ ಸ್ವಲ್ಪ ಮಟ್ಟಿನ ಸೆಖೆಯ ವಾತಾವರಣ ಕಂಡುಬರಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಸರಣಿ ಚಂಡಮಾರುತ, ಹಿಂಗಾರು ವಿಳಂಬ: ಅಕ್ಟೋಬರ್ 28ರಂದು ಮ್ಯಾನ್ಮಾರ್ ದಕ್ಷಿಣ ತುದಿಯ ಕರಾವಳಿಯಲ್ಲಿ ಸುಳಿಗಾಳಿ (ತಿರುಗುವಿಕೆ) ಆರಂಭವಾಗುವ ಲಕ್ಷಣಗಳಿದ್ದು, ನವೆಂಬರ್ 1ರ ಸುಮಾರಿಗೆ ಇದು ಚಂಡಮಾರುತವಾಗಿ ಪರಿವರ್ತನೆಗೊಂಡು ಆಂಧ್ರ ಕರಾವಳಿ ಸಮೀಪ ತಲುಪುವ ನಿರೀಕ್ಷೆಯಿದೆ. ಈ ಎರಡು ಸರಣಿ ಚಂಡಮಾರುತಗಳ ಪ್ರಭಾವದಿಂದ ರಾಜ್ಯದಲ್ಲಿ ಹಿಂಗಾರು ಮಳೆ ಇನ್ನಷ್ಟು ವಿಳಂಬಗೊಳ್ಳುವ ಸಾಧ್ಯತೆಗಳಿವೆ.

ಆದರೂ, ಪ್ರಸ್ತುತ ಮುನ್ಸೂಚನೆಯಂತೆ ನವೆಂಬರ್ 2ರಿಂದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆರಂಭವಾಗುವ ನಿರೀಕ್ಷೆಯಿದೆ.