ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ವಿತರಣಾ ವಲಯವನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ತೆರೆಮರೆಯಲ್ಲಿ ಭಾರಿ ವೇದಿಕೆ ಸಿದ್ಧವಾಗುತ್ತಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಇದಕ್ಕೆ ಮುಖ್ಯ ಕಾರಣ, ದೇಶದ ಪ್ರತಿಷ್ಠಿತ ‘ಟಾಟಾ ಪವರ್’ (Tata Power)ಕಂಪನಿಯು ಇಡೀ ಕರ್ನಾಟಕದ ಅರ್ಧದಷ್ಟು ಭಾಗಕ್ಕೆ ವಿದ್ಯುತ್ ವಿತರಣೆ ಮಾಡಲು ಲೈಸೆನ್ಸ್ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (KERC) ಅರ್ಜಿ ಸಲ್ಲಿಸಿರುವುದು. ಕೇವಲ ಕರ್ನಾಟಕ ಮಾತ್ರವಲ್ಲದೆ, ದೇಶದ 15 ರಾಜ್ಯಗಳಲ್ಲಿ ವಿದ್ಯುತ್ ವಿತರಣೆಯ ಜವಾಬ್ದಾರಿ ಕೋರಿ ಟಾಟಾ ಕಂಪನಿ ಅರ್ಜಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.
20 ಲಕ್ಷ ಆಕ್ಷೇಪಣೆಗಳ ನಡುವೆಯೂ KERC ಚಿತ್ತ:
ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಮಾಡಬಾರದು ಎಂದು ಈಗಾಗಲೇ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ತೀವ್ರ ಸಾರ್ವಜನಿಕ ವಿರೋಧ ವ್ಯಕ್ತವಾಗುತ್ತಿದ್ದರೂ, KERC ಮಾತ್ರ ಟಾಟಾ ಪವರ್ ಕಂಪನಿಯ ಅರ್ಜಿಯನ್ನು ತಳ್ಳಿಹಾಕದೆ ಪರಿಶೀಲನೆಗೆ ಮುಂದಾಗಿದೆ. ಈ ಸಂಬಂಧ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಆಯೋಗ ನಿರ್ಧರಿಸಿದ್ದು, ಮುಂದಿನ ವಾರ ಈ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಪ್ರತಿ ಬಾರಿ ವಿದ್ಯುತ್ ದರ ಪರಿಷ್ಕರಣೆ ಮಾಡುವಾಗಲೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಕೊನೆಗೆ ದರ ಹೆಚ್ಚಿಸುವ ಆಯೋಗ, ಈಗ ಟಾಟಾ ಪವರ್ ಕಂಪನಿಯ ಅರ್ಜಿ ವಿಷಯದಲ್ಲೂ ಕಂಪನಿಯ ಪರವಾಗಿ ನಿಲ್ಲುತ್ತಾ ಎಂಬ ತೀವ್ರ ಕುತೂಹಲ ಮೂಡಿದೆ.
ಒಂದು ಕಾಲು ಹಿಂದಿಟ್ಟ ಸರ್ಕಾರ; ಕ್ಯಾಬಿನೆಟ್‌ನಲ್ಲಿ ಅಂತಿಮ ತೀರ್ಮಾನ:
ವಿದ್ಯುತ್ ಖಾಸಗೀಕರಣದ ಸಾಧಕ-ಬಾಧಕಗಳ ಕುರಿತು ಮಾಧ್ಯಮಗಳಲ್ಲಿ ಸಮಗ್ರ ವರದಿ ಪ್ರಕಟವಾಗುತ್ತಿದ್ದಂತೆ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತಿರುವ ರಾಜ್ಯ ಸರ್ಕಾರ ಸದ್ಯಕ್ಕೆ ಒಂದು ಹೆಜ್ಜೆ ಹಿಂದಿಟ್ಟಿದೆ. ವಿದ್ಯುತ್ ನೌಕರರ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು “ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟ ಭರವಸೆ ನೀಡಿದ್ದಾರೆ. ಆದರೆ ಮುಖ್ಯಮಂತ್ರಿಗಳು, “ಇದು ನನ್ನೊಬ್ಬನ ನಿರ್ಧಾರವಲ್ಲ, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ” ಎಂದಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಎಲ್ಲಾ ಎಸ್ಕಾಂಗಳ (ESCOMs) ಎಂಡಿಗಳು ಹಾಗೂ ಸಂಪುಟ ಸದಸ್ಯರ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ನಾಡಿದ್ದು ನಡೆಯಲಿರುವ ನಿರ್ಣಾಯಕ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಸರ್ಕಾರ ತನ್ನ ಅಂತಿಮ ನಿರ್ಧಾರ ಪ್ರಕಟಿಸಲಿದೆ.
