ಕೊಚ್ಚಿ: ಮನೆಯೊಂದರ ಆವರಣದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಆಘಾತಕಾರಿ ಘಟನೆ ಕೇರಳದ ಕೊಚ್ಚಿಯ ತೇವರ (Thevara) ಎಂಬಲ್ಲಿ ಶನಿವಾರ ನಡೆದಿದೆ. ಕೊಲೆಯಾದ ಮಹಿಳೆ ಯಾರು ಎಂಬುದು ಇನ್ನೂ ಗುರುತಿಸಲಾಗಿಲ್ಲ.
ಸ್ವಚ್ಛತಾ ಕಾರ್ಯಕ್ಕಾಗಿ ನಿಯೋಜಿತರಾಗಿರುವ ‘ಹರಿತ ಕರ್ಮ ಸೇನೆ’ಯ ಸ್ವಯಂಸೇವಕರು ಕಸ ಸಂಗ್ರಹಣೆಗಾಗಿ ಮನೆಗೆ ಬಂದಾಗ, ಮನೆಯ ಮುಂಭಾಗದ ಅಂಗಳದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಶವ ಇರುವುದನ್ನು ಗಮನಿಸಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಶವ ಪತ್ತೆಯಾದ ಸ್ಥಳದಲ್ಲಿಯೇ ಮನೆಯ ಮಾಲೀಕ ಕೂಡ ನಿಂತಿದ್ದನು. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ, ಸ್ಥಳೀಯ ಕೌನ್ಸಿಲರ್‌ಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮನೆಯ ಮಾಲೀಕ ಮತ್ತು ಮೃತ ಮಹಿಳೆಯ ನಡುವೆ ಸಂಬಂಧವಿತ್ತು ಎನ್ನಲಾಗಿದೆ. ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆದಿದ್ದು, ವಾಗ್ವಾದ ವಿಕೋಪಕ್ಕೆ ಹೋದಾಗ ಆತ ಆಕೆಯನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆಗೆ ನಿಖರ ಕಾರಣವೇನು ಮತ್ತು ಹತ್ಯೆ ಹೇಗೆ ನಡೆಸಲಾಗಿದೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮನೆಯ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶೀಘ್ರದಲ್ಲೇ ಆತನ ಬಂಧನವನ್ನು ಅಧಿಕೃತವಾಗಿ ದಾಖಲಿಸಲಿದ್ದಾರೆ. ಮೃತ ಮಹಿಳೆಯ ಗುರುತು ಪತ್ತೆ ಹಚ್ಚಲು ಮತ್ತು ಘಟನೆಯ ಸಂಪೂರ್ಣ ವಿವರ ಕಲೆಹಾಕಲು ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
