ಕಾರವಾರ: ತಾಲ್ಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದ 5ನೇ ಮತ್ತು 6ನೇ ಘಟಕದ ಕಾಮಗಾರಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಟೆಂಪೋ ರಸ್ತೆಯಲ್ಲೇ ಪಲ್ಟಿಯಾಗಿದೆ. ಪರಿಣಾಮ 15 ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿ ಎನ್ನಲಾಗಿದೆ.
ಸೋಮವಾರ ಕೈಗಾ ಅಣುವಿದ್ಯುತ್ ಸ್ಥಾವರದ ಕೆಲಸಕ್ಕೆಂದು ಕಾರ್ಮಿಕರನ್ನು ಹೊತ್ತ ಟೆಂಪೋ ಮಲ್ಲಾಪುರದಿಂದ ಕೈಗಾದತ್ತ ತೆರಳುತ್ತಿತ್ತು. ಈ ವೇಳೆ ಅಣುವಿದ್ಯುತ್ ಸ್ಥಾವರಕ್ಕೆ ತೆರಳುವ ಮಾರ್ಗ ಮದ್ಯೆ ರಸ್ತೆ ತಿರುವಿನಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ಪರಿಣಾಮ ಟೆಂಪೋ ರಸ್ತೆಯ ಒಂದು ಬದಿಯಲ್ಲಿ ಅಡ್ಡ ಬಿದ್ದಿದೆ.
ಪರಿಣಾಮ ಟೆಂಪೋದಲ್ಲಿದ್ದ ಸುಮಾರು 11 ಮಂದಿ ಕಾರ್ಮಿಕರು ಗಾಯಗೊಂಡಿದ್ದರು. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಮಲ್ಲಾಪುರ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಟೆಂಪೋದಲ್ಲಿ ಸಿಲುಕಿದ್ದ ಗಾಯಾಳುಗಳನ್ನು ರಕ್ಷಿಸಿ ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ.
ಕೈಗಾ ತೆರಳುವ ರಸ್ತೆ ತೀವ್ರ ತಿರುವುಗಳಿಂದ ಕೂಡಿದ್ದು, ಇದರಿಂದಾಗಿ ಚಾಲಕ ನಿಯಂತ್ರಣ ಕಳೆದುಕೊಂಡು ಟೆಂಪೋ ಪಲ್ಟಿಯಾಗಿರಬಹುದೆಂದು ಅಂದಾಜಿಸಲಾಗಿದೆ. ಮಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
