S Shorts

ಯೋಗೇಶ್ ಗೌಡ ಹ*ತ್ಯೆ ಕೇಸ್: ಕೋರ್ಟ್‌ನಲ್ಲಿ ಕಣ್ಣೀರಿಟ್ಟ Vinay Kulkarni, 17 ಅಪರಾಧಿಗಳ ಶಿಕ್ಷೆ ಪ್ರಮಾಣ ನಾಳೆಗೆ ಮುಂದೂಡಿಕೆ!

ಯೋಗೇಶ್ ಗೌಡ ಹ*ತ್ಯೆ ಕೇಸ್: ಕೋರ್ಟ್‌ನಲ್ಲಿ ಕಣ್ಣೀರಿಟ್ಟ Vinay Kulkarni, 17 ಅಪರಾಧಿಗಳ ಶಿಕ್ಷೆ ಪ್ರಮಾಣ ನಾಳೆಗೆ ಮುಂದೂಡಿಕೆ!
Author: Sagaradventure
Posted By: Sagaradventure
Updated: Apr 16, 2026 | 3:10 PM

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಧಾರವಾಡದ ಜಿ.ಪಂ. ಸದಸ್ಯ ಯೋಗೇಶ್ ಗೌಡ ಹ*ತ್ಯೆ ಪ್ರಕರಣದ ಅಂತಿಮ ಘಟ್ಟ ಇದೀಗ ತಲುಪಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಪ್ರಿಲ್ 15 ರಂದು 17 ಜನರನ್ನು ಅಪರಾಧಿಗಳೆಂದು ಘೋಷಿಸಿತ್ತು. ಇಂದು (ಏಪ್ರಿಲ್ 16) ಶಿಕ್ಷೆಯ ಪ್ರಮಾಣ ಪ್ರಕಟವಾಗಬೇಕಿತ್ತು. ಆದರೆ, ನ್ಯಾಯಾಲಯವು ಶಿಕ್ಷೆಯ ಪ್ರಮಾಣದ ತೀರ್ಪನ್ನು ನಾಳೆಗೆ (ಏಪ್ರಿಲ್ 17) ಮುಂದೂಡಿದೆ.

ಇಂದು ನ್ಯಾಯಾಲಯದಲ್ಲಿ ಶಿಕ್ಷೆಯ ಪ್ರಮಾಣದ ಕುರಿತು ಸುದೀರ್ಘ ವಾದ-ಪ್ರತಿವಾದಗಳು ನಡೆದವು. ಈ ವೇಳೆ ಪ್ರತಿಯೊಬ್ಬ ಅಪರಾಧಿಯೂ ತಮಗೆ ಕಡಿಮೆ ಶಿಕ್ಷೆ ನೀಡುವಂತೆ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟು ಅಂಗಲಾಚಿದರು. 

ಪ್ರಮುಖ ಅಪರಾಧಿ (ಎ-15), ಶಾಸಕ ವಿನಯ್ ಕುಲಕರ್ಣಿ ಅವರು ನ್ಯಾಯಾಧೀಶರ ಮುಂದೆ ತಮ್ಮ ಅಳಲು ತೋಡಿಕೊಂಡರು. “ನಾನು ಕಳೆದ 27 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದೇನೆ, ಯಾರಿಗೂ ತೊಂದರೆ ಕೊಟ್ಟಿಲ್ಲ. ನನಗೆ ಮದುವೆ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೃಷಿಕನಾಗಿರುವ ನಾನು ಸುಮಾರು 3500 ಹಸುಗಳನ್ನು ಸಾಕುತ್ತಿದ್ದು, ನನ್ನ ಮೇಲೆ ಹಲವರು ಅವಲಂಬಿತರಾಗಿದ್ದಾರೆ. ಕೇವಲ ರಾಜಕೀಯ ದ್ವೇಷಕ್ಕಾಗಿ ನನ್ನ ಮೇಲೆ ಈ ಕೇಸ್ ಹಾಕಲಾಗಿದೆ” ಎಂದು ವಿನಂತಿಸಿದರು.

ಇದೇ ವೇಳೆ ಇತರ ಅಪರಾಧಿಗಳು ಕೂಡ ತಮ್ಮ ಕೌಟುಂಬಿಕ ಹಾಗೂ ಆರೋಗ್ಯ ಸಮಸ್ಯೆಗಳನ್ನು ಮುಂದಿಟ್ಟು ಶಿಕ್ಷೆ ಕಡಿತಕ್ಕೆ ಮನವಿ ಮಾಡಿದರು. ಆಟೋ ಮತ್ತು ಕಾರ್ ಚಾಲಕರಾಗಿರುವ ಎ-4 ಹಾಗೂ ಎ-14 ವಯಸ್ಸಾದ ತಂದೆ-ತಾಯಿಯನ್ನು ಸಾಕುವ ಜವಾಬ್ದಾರಿ ತಮ್ಮ ಮೇಲಿದೆ ಎಂದರು. ರಿಯಲ್ ಎಸ್ಟೇಟ್ ಉದ್ಯೋಗಿ ಎ-5 ಅನಾರೋಗ್ಯ ಪೀಡಿತ ಪೋಷಕರ ಕಾರಣ ನೀಡಿದರೆ, ಎ-9, ಎ-10 ಮತ್ತು ಎ-11 ತಾವು ಅನಾಥರು ಹಾಗೂ ಸಣ್ಣ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕರುಣೆ ತೋರುವಂತೆ ಕೇಳಿಕೊಂಡರು. ಕೃಷಿಕರು, ಟೈಲರ್ ಆಗಿರುವ ಎ-6, ಎ-12 ಮತ್ತು ಎ-18 ತಮ್ಮ ಪುಟ್ಟ ಮಕ್ಕಳ ಹಾಗೂ ಹೆಣ್ಣು ಮಕ್ಕಳ ಮದುವೆಯ ಜವಾಬ್ದಾರಿಯನ್ನು ನ್ಯಾಯಾಧೀಶರ ಮುಂದಿಟ್ಟರು.

ತೀವ್ರ ಅನಾರೋಗ್ಯದ ಕಾರಣಗಳನ್ನೂ ಕೋರ್ಟ್ ಮುಂದೆ ಪ್ರಸ್ತಾಪಿಸಲಾಯಿತು. ಎ-13 ತಮಗೆ ಹೃದಯ ಶಸ್ತ್ರಚಿಕಿತ್ಸೆಯಾಗಿ ಸ್ಟಂಟ್ ಅಳವಡಿಸಲಾಗಿದೆ ಎಂದರೆ, ಎ-16 ದಂಪತಿಗಳಿಬ್ಬರೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇತ್ತೀಚೆಗಷ್ಟೇ ಮೊಮ್ಮಗನ ಸಾವಿನ ನೋವಿನಲ್ಲಿರುವುದಾಗಿ ತಿಳಿಸಿದರು. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಎ-7 ಆಟೋ ಚಾಲಕ, ಅನಾಥನಾಗಿರುವ ಎ-8 ಕೂಡ ಶಿಕ್ಷೆ ಕಡಿಮೆ ಮಾಡುವಂತೆ ಬೇಡಿಕೊಂಡರು. ಎ-19 (ಟಿಂಗರಿಕರ್) ತಮ್ಮ ಸೇವಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಹೊಂದಿಲ್ಲ ಎಂದು ವಾದಿಸಿದರು. 

ಮಾಫಿ ಸಾಕ್ಷಿಯಾಗಿರುವ ಎ-17 ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ. ಒಟ್ಟಾರೆಯಾಗಿ ಎಲ್ಲಾ ಅಪರಾಧಿಗಳ ಕಣ್ಣೀರಿನ ಮನವಿಗಳನ್ನು ಆಲಿಸಿರುವ ನ್ಯಾಯಾಲಯವು ನಾಳೆ ಅಂತಿಮ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.