ರಾಯಚೂರು: ಭಾರತದಲ್ಲಿ ಗಲಭೆ ಎಬ್ಬಿಸಲು ಅರಬ್ ಮೂಲದ ವ್ಯಕ್ತಿಯೋರ್ವನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಆರೋಪದ ಮೇಲೆ ರಾಯಚೂರಿನಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದ ಯುವಕನೊಬ್ಬನನ್ನು ಸದರ್‌ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೊಹಮ್ಮದ್ ಶಾಹಿಲ್ (24) ಎಂದು ಗುರುತಿಸಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ, ಪಿಸ್ತೂಲ್‌ಗೆ ಬೇಡಿಕೆ
ಆರೋಪಿ ಶಾಹಿಲ್ ಇನ್‌ಸ್ಟಾಗ್ರಾಮ್‌ನಲ್ಲಿ ‘ರಾಣಾ ಭಾಯ್’ ಹೆಸರಿನ ವಿದೇಶಿ ವ್ಯಕ್ತಿಯ ಖಾತೆಯ ಪೋಸ್ಟ್‌ಗಳನ್ನು ಲೈಕ್, ಶೇರ್ ಹಾಗೂ ಕಮೆಂಟ್ ಮಾಡುವ ಮೂಲಕ ಆತನೊಂದಿಗೆ ಸಂಪರ್ಕ ಬೆಳೆಸಿದ್ದ. ಆತನ ಪೋಸ್ಟ್‌ಗಳಿಂದ ಪ್ರಭಾವಿತನಾಗಿದ್ದ ಶಾಹಿಲ್, “ಭಾಯ್ ಮುಝೇ ಏಕ್ ಪಿಸ್ತೂಲ್ ಚಾಹಿಯೇ ಥೀ, ಮಿಲೇಗಿ ಕ್ಯಾ” (ನನಗೊಂದು ಪಿಸ್ತೂಲ್ ಬೇಕಿತ್ತು, ಸಿಗುತ್ತದಾ?) ಎಂದು ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ.
ಗಲಭೆ ಸೃಷ್ಟಿಸಲು ಹಣ ಮತ್ತು ಪಿಸ್ತೂಲ್ ಆಮಿಷ
ಬಳಿಕ ಇಬ್ಬರೂ ವಾಟ್ಸಾಪ್ ನಂಬರ್ ವಿನಿಮಯ ಮಾಡಿಕೊಂಡಿದ್ದು, ಜುಲೈ 14ರಿಂದ ನಿರಂತರವಾಗಿ ಚಾಟಿಂಗ್ ನಡೆಸುತ್ತಿದ್ದರು. ಭಾರತದಲ್ಲಿ ಗಲಭೆ ಸೃಷ್ಟಿಸುವಂತೆ ‘ರಾಣಾ ಭಾಯ್’ ಈತನಿಗೆ ಮೈಂಡ್‌ವಾಷ್ ಮಾಡಿದ್ದು, ಇದಕ್ಕಾಗಿ ಎಷ್ಟು ಬೇಕಾದರೂ ಹಣ ಹಾಗೂ ಪಿಸ್ತೂಲ್ ನೀಡುವುದಾಗಿ ಆಮಿಷ ಒಡ್ಡಿದ್ದನು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದಡಿ ಸದರ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್ ಶಾಹಿಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಗಲಭೆ ಸೃಷ್ಟಿಸುವ ಈ ಸಂಚಿನಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.
