ಕನ್ನಡ ಕಿರುತೆರೆ ವೀಕ್ಷಕರ ನೆಚ್ಚಿನ ಕಾರ್ಯಕ್ರಮ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್’ ಮತ್ತೊಮ್ಮೆ ಅದ್ಧೂರಿಯಾಗಿ ಮೂಡಿಬರಲು ಸಜ್ಜಾಗಿದೆ. ಅಕ್ಟೋಬರ್ 30, 31 ಮತ್ತು ನವೆಂಬರ್ 1ರಂದು ಸತತ ಮೂರು ದಿನಗಳ ಕಾಲ ಈ ಮನರಂಜನಾ ಕಾರ್ಯಕ್ರಮ ಪ್ರಸಾರವಾಗಲಿದೆ.
ಪ್ರತಿದಿನ ಸಂಜೆ 5:30ರಿಂದ 6:30ರವರೆಗೆ ರೆಡ್ ಕಾರ್ಪೆಟ್ ಹಾಗೂ 6:30ರಿಂದ ರಾತ್ರಿ 10:30ರವರೆಗೆ ಕುಟುಂಬ ಅವಾರ್ಡ್ಸ್‌ನ ಪ್ರಧಾನ ಕಾರ್ಯಕ್ರಮ ಕಿರುತೆರೆ ವೀಕ್ಷಕರನ್ನು ರಂಜಿಸಲಿದೆ. ಕಿರುತೆರೆಯ ಜನಪ್ರಿಯ ಕಲಾವಿದರು ಮತ್ತು ಸ್ಯಾಂಡಲ್‌ವುಡ್‌ನ ತಾರೆಯರು ಒಂದೇ ವೇದಿಕೆಯಲ್ಲಿ ಸೇರಿ ವೀಕ್ಷಕರಿಗೆ ಭರಪೂರ ಮನರಂಜನೆ ನೀಡಲಿದ್ದಾರೆ.
80 ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ
ಈ ಬಾರಿಯ ಕುಟುಂಬ ಅವಾರ್ಡ್ಸ್‌ನಲ್ಲಿ ಬರೋಬ್ಬರಿ 80 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುತ್ತಿದೆ. ನೆಚ್ಚಿನ ನಟ, ನಟಿ, ಜೋಡಿ, ಧಾರಾವಾಹಿ, ರಿಯಾಲಿಟಿ ಶೋ ಹಾಗೂ ನಿರೂಪಕ ಸೇರಿದಂತೆ ಹಲವು ವಿಭಾಗಗಳಲ್ಲಿ ಕಲಾವಿದರನ್ನು ಗುರುತಿಸಿ ಗೌರವಿಸಲಾಗುತ್ತದೆ. ಇದರ ಜೊತೆಗೆ, ತೆರೆಮರೆಯಲ್ಲಿ ಶ್ರಮಿಸುವ ತಂತ್ರಜ್ಞರು ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಮಾನ್ಯ ಸಾಧಕರನ್ನೂ ಈ ಪ್ರತಿಷ್ಠಿತ ವೇದಿಕೆಯಲ್ಲಿ ಸನ್ಮಾನಿಸಲಾಗುತ್ತಿದೆ.
ಹಿರಿತೆರೆ ತಾರೆಯರ ಮೆರುಗು
ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರು ಹಾಗೂ ಯುವ ತಾರೆಯರು ಭಾಗವಹಿಸಿ ಮೆರುಗು ಹೆಚ್ಚಿಸಲಿದ್ದಾರೆ. ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಧನಂಜಯ್, ರೋರಿಂಗ್ ಸ್ಟಾರ್ ಶ್ರೀಮುರಳಿ, ಡಾರ್ಲಿಂಗ್ ಕೃಷ್ಣ, ಶರಣ್, ವಿಜಯ ರಾಘವೇಂದ್ರ, ತರುಣ್ ಸುಧೀರ್, ಪ್ರಕಾಶ್ ಬೆಳವಾಡಿ, ಟಿ.ಎನ್ ಸೀತಾರಾಮ್ ಅವರಂತಹ ಗಣ್ಯರು ವೇದಿಕೆ ಹಂಚಿಕೊಳ್ಳಲಿದ್ದಾರೆ.
ನಟಿಯರಾದ ತಾರಾ, ಸುಧಾರಾಣಿ, ಖುಷ್ಬೂ, ಅಮೂಲ್ಯ, ಆಶಿಕಾ ರಂಗನಾಥ್, ನಿಶ್ವಿಕಾ ನಾಯ್ಡು, ಮೇಘನಾ ರಾಜ್, ಅದಿತಿ ಪ್ರಭುದೇವ ಸೇರಿದಂತೆ ಬಹುದೊಡ್ಡ ತಾರಾಗಣವೇ ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ಗಾಯಕರಾದ ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ಉಪಸ್ಥಿತರಿರಲಿದ್ದಾರೆ.
4 ಜನಪ್ರಿಯ ನಿರೂಪಕರು, 31 ಜಿಲ್ಲೆಗಳಲ್ಲಿ ಕ್ಯಾಂಟರ್ ಅಭಿಯಾನ
ಕಿರುತೆರೆಯ ನೆಚ್ಚಿನ ನಿರೂಪಕರಾದ ಅಕುಲ್ ಬಾಲಾಜಿ, ಅನುಶ್ರೀ, ಕುರಿ ಪ್ರತಾಪ್ ಮತ್ತು ಶ್ವೇತಾ ಚಂಗಪ್ಪ ತಮ್ಮ ವಿಶಿಷ್ಟ ಶೈಲಿಯ ಮಾತು ಹಾಗೂ ಹಾಸ್ಯದ ಮೂಲಕ ಈ ಮೂರು ದಿನಗಳ ಸಂಭ್ರಮವನ್ನು ಮುನ್ನಡೆಸಲಿದ್ದಾರೆ. ಪ್ರಶಸ್ತಿ ಪ್ರದಾನಕ್ಕೂ ಮುನ್ನ ಜೀ ಕನ್ನಡ ವಾಹಿನಿಯು ರಾಜ್ಯದ 31 ಜಿಲ್ಲೆಗಳಲ್ಲಿ ವಿಶೇಷ ಕ್ಯಾಂಟರ್ ಅಭಿಯಾನ ನಡೆಸಿತ್ತು. ಈ ಮೂಲಕ ರಾಜ್ಯದ ಮೂಲೆಮೂಲೆಯ ವೀಕ್ಷಕರಿಗೆ ತಮ್ಮ ನೆಚ್ಚಿನ ಕಲಾವಿದರು ಮತ್ತು ಕಾರ್ಯಕ್ರಮಗಳಿಗೆ ಮತ ಹಾಕುವ ಅವಕಾಶ ಕಲ್ಪಿಸಲಾಗಿತ್ತು.
