ಚಿತ್ರದುರ್ಗ: ಜಿಲ್ಲೆಯಲ್ಲಿ ನಡೆದ ವಿಚಿತ್ರ ಪ್ರೇಮ ವಿವಾಹವೊಂದು ಇದೀಗ ಇಡೀ ರಾಜ್ಯದಲ್ಲೇ ಸುದ್ದಿಯಾಗಿದೆ. ಚಿತ್ರದುರ್ಗದ ಜೆ.ಜೆ.ಹಟ್ಟಿ ಬಡಾವಣೆಯ ವಸೀಂ ಎಂಬಾತ, ತಾನು ಪ್ರೀತಿಸುತ್ತಿದ್ದ ಇಬ್ಬರೂ ಯುವತಿಯರನ್ನು ಒಂದೇ ವೇಳೆ, ಒಂದೇ ಮಂಟಪದಲ್ಲಿ ಮದುವೆಯಾಗುವ ಮೂಲಕ ನೋಡುಗರ ಹುಬ್ಬೇರಿಸುವಂತೆ ಮಾಡಿದ್ದಾನೆ. ಮದುವೆಯಾದ ಇಬ್ಬರು ಯುವತಿಯರೂ ಗೋವಾ ಮೂಲದವರು ಎನ್ನಲಾಗಿದೆ.
ವಸೀಂ ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದು, ವಿವಾಹವಾದ ಯುವತಿಯರಲ್ಲಿ ಶಿಫಾ ಎಂಬ ಯುವತಿಯ ಜೊತೆ ಸುಮಾರು 13 ವರ್ಷಗಳಿಂದ ಪರಿಚಯ ಮತ್ತು ಸಂಬಂಧ ಇತ್ತು. ಮತ್ತೊಬ್ಬಳು ಜನತ್ ಎಂಬ ಯುವತಿ, ಕಳೆದ ಏಳು ವರ್ಷಗಳಿಂದ ವಸೀಂನೊಂದಿಗೆ ಪ್ರೀತಿಯಲ್ಲಿ ತೊಡಗಿದ್ದಳು ಎಂದು ತಿಳಿದುಬಂದಿದೆ.
ಇಬ್ಬರು ಯುವತಿಯರಲ್ಲಿ ಒಬ್ಬಳು ಇಂಜಿನಿಯರಿಂಗ್ ಪದವಿ ಪಡೆದಿದ್ದು ಉದ್ಯೋಗದಲ್ಲಿದ್ದರೆ, ಮತ್ತೊಬ್ಬಳು ಕೆಎಫ್ಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ವಸೀಂ ಇಬ್ಬರನ್ನೂ ವಿವಾಹವಾಗಲು ಮನವೊಲಿಸಿದ್ದು, ನಂತರ ಕುಟುಂಬಗಳ ಮಧ್ಯೆ ಮಾತುಕತೆ ನಡೆದಿತ್ತು. ಕೊನೆಗೆ ಎಲ್ಲರೂ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಮದುವೆ ನೆರವೇರಿದೆ.
ಒಂದೇ ಮಂಟಪದಲ್ಲಿ ನಡೆದ ಈ ಅಪರೂಪದ ವಿವಾಹ ಚಿತ್ರದುರ್ಗದಲ್ಲಿ ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರೀ ಚರ್ಚೆಗೆ ಗ್ರಾಸವಾಗಿದೆ.
