S Shorts

Tipu Sultan ಕಟೌಟ್‌ಗೆ ದೇಶ ವಿರೋಧಿ ಹಾಡು ಬಳಕೆ; ಹಿಂದೂ ಸಂಘಟನೆಗಳ ಆಕ್ರೋಶ

Tipu Sultan ಕಟೌಟ್‌ಗೆ ದೇಶ ವಿರೋಧಿ ಹಾಡು ಬಳಕೆ; ಹಿಂದೂ ಸಂಘಟನೆಗಳ ಆಕ್ರೋಶ
Author: Sagaradventure
Posted By: Sagaradventure
Updated: Aug 24, 2026 | 10:54 AM

ಚಿಕ್ಕಮಗಳೂರು ನಗರದಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಅವರ ಬೃಹತ್ ಕಟೌಟ್‌ನ ವಿಡಿಯೋಗೆ ದೇಶ ವಿರೋಧಿ ಹಾಡೊಂದನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ವಿಡಿಯೋ 

ಬುಧವಾರ ಈದ್ ಮಿಲಾದ್ ಅಂಗವಾಗಿ ನಗರದ ಟಿಪ್ಪು ನಗರದಲ್ಲಿ ಬರೋಬ್ಬರಿ 50 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ನಿಲ್ಲಿಸಲಾಗಿತ್ತು. ಕಿಡಿಗೇಡಿಗಳು ಈ ಕಟೌಟ್‌ನ ವಿಡಿಯೋವನ್ನು ಚಿತ್ರೀಕರಿಸಿ, ಅದಕ್ಕೆ ಪಾಕಿಸ್ತಾನದ ‘ಮುಜಾಹಿದ್’ಗೆ ಸಂಬಂಧಿಸಿದ ಆಕ್ಷೇಪಾರ್ಹ ಹಾಗೂ ದೇಶ ವಿರೋಧಿ ಹಿನ್ನೆಲೆ ಗೀತೆಯನ್ನು ಎಡಿಟ್ ಮಾಡಿ ಸೇರ್ಪಡೆ ಮಾಡಿದ್ದಾರೆ. ಬಳಿಕ ಆ ವಿಡಿಯೋವನ್ನು ‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಹಿಂದೂ ಸಂಘಟನೆಗಳಿಂದ ತೀವ್ರ ಖಂಡನೆ 

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೈರಲ್ ವಿಡಿಯೋ ಬಗ್ಗೆ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹಾಗೂ ಕೋಮು ಸೌಹಾರ್ದತೆ ಕದಡಲು ಯತ್ನಿಸುತ್ತಿರುವ ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ. ಘಟನೆಯು ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ವಿಡಿಯೋ ಅಪ್‌ಲೋಡ್ ಮಾಡಿದವರ ಪತ್ತೆಗೆ ಮುಂದಾಗಿದ್ದಾರೆ.