ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುದೊಡ್ಡ ಬೆಳವಣಿಗೆಯೊಂದು ನಡೆದಿದ್ದು, ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಅವರನ್ನು ಅಧಿಕೃತವಾಗಿ ಬಂಧಿಸಿದ್ದಾರೆ.
ಕಳೆದ 4 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಭಯತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ, ಇಬ್ಬರೂ ತನಿಖೆಗೆ ಸರಿಯಾಗಿ ಸಹಕರಿಸದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಬಂಧಿಸಿರುವ ಇ.ಡಿ ಅಧಿಕಾರಿಗಳು, ತಡರಾತ್ರಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಇಂದಿನಿಂದ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿಯೇ ಇಬ್ಬರು ಆರೋಪಿಗಳ ವಿಚಾರಣೆ ಮುಂದುವರೆಯಲಿದೆ.
ಈ ಮೊದಲು ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಈ ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನೇಮಕಾತಿ ಅಕ್ರಮದಲ್ಲಿ ಭಾರೀ ಪ್ರಮಾಣದ ಹವಾಲಾ ಹಣದ ವಹಿವಾಟು ನಡೆದಿರುವ ಬಲವಾದ ಶಂಕೆಯಿದ್ದು, ಈ ನಿಟ್ಟಿನಲ್ಲಿ ಇ.ಡಿ ಅಧಿಕಾರಿಗಳು ಈಗ ತನಿಖೆ ಚುರುಕುಗೊಳಿಸಿದ್ದಾರೆ.
ಮತ್ತೊಂದೆಡೆ, ಇದೇ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರ ನಿವಾಸಗಳ ಮೇಲೂ ಸಿಐಡಿ ಅಧಿಕಾರಿಗಳು ತಪಾಸಣೆ ನಡೆಸಿದ್ದು, 2 ಮೊಬೈಲ್ ಹಾಗೂ 1 ಟ್ಯಾಬ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆ ವೇಳೆ ಶಾಂತಾ ಹೊಸಮನಿ ಅವರು ಕೂಡ ಅಧಿಕಾರಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
