S Shorts

Assembly | ನಮ್ಮದು ಖಾಲಿ ಚೊಂಬಲ್ಲ, ತುಂಬಿದ ಕೊಡ! ವಿರೋಧ ಪಕ್ಷಗಳ ಟೀಕೆಗೆ ಸಿದ್ದು ಕೌಂಟರ್

Assembly  | ನಮ್ಮದು ಖಾಲಿ ಚೊಂಬಲ್ಲ, ತುಂಬಿದ ಕೊಡ! ವಿರೋಧ ಪಕ್ಷಗಳ ಟೀಕೆಗೆ ಸಿದ್ದು ಕೌಂಟರ್
Author: Meghana Gowda
Posted By: Meghana Gowda
Updated: Mar 25, 2026 | 12:34 PM

ಬೆಂಗಳೂರು: ರಾಜ್ಯ ಬಜೆಟ್ (Budget) ಮೇಲಿನ ಸುದೀರ್ಘ ಚರ್ಚೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM  siddaramaiah) ಅವರು ಅತ್ಯಂತ ಸಮರ್ಥವಾಗಿ ಉತ್ತರಿಸಿದರು. ಈ ಬಾರಿಯ ಬಜೆಟ್ ಚರ್ಚೆಯು ಒಂದು ಹೊಸ ದಾಖಲೆಗೆ ಸಾಕ್ಷಿಯಾಗಿದ್ದು, ಒಟ್ಟು 50 ಸದಸ್ಯರು ಸುಮಾರು 24 ಗಂಟೆ 45 ನಿಮಿಷಗಳ ಕಾಲ ಸುದೀರ್ಘವಾಗಿ ಚರ್ಚಿಸಿದ್ದಾರೆ ಎಂದು ಸಿಎಂ ಹೆಮ್ಮೆಯಿಂದ ತಿಳಿಸಿದರು.

ಇದರಲ್ಲಿ ವಿರೋಧ ಪಕ್ಷದ 21 ಸದಸ್ಯರು ಸುಮಾರು 12 ಗಂಟೆಗಳಿಗೂ ಹೆಚ್ಚು ಕಾಲ ಮಾತನಾಡಿದ್ದು, ವಿಶೇಷವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರೇ 3 ಗಂಟೆ 6 ನಿಮಿಷಗಳ ಕಾಲ ಸುದೀರ್ಘ ಭಾಷಣ ಮಾಡಿದ್ದಾರೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದರು. ತಮ್ಮ ರಾಜಕೀಯ ಜೀವನದಲ್ಲಿ ಇದುವರೆಗೆ 17 ಬಜೆಟ್‌ಗಳನ್ನು ಮಂಡಿಸಿರುವ ಅನುಭವವನ್ನು ಸ್ಮರಿಸಿದ ಸಿದ್ದರಾಮಯ್ಯ, ಟೀಕೆ ಮತ್ತು ವಿಮರ್ಶೆಗಳನ್ನು ಸಮಚಿತ್ತದಿಂದ ಸ್ವೀಕರಿಸುವುದಾಗಿ ಹೇಳಿದರು.

ಮಾವು vs ಬೇವು: ಅಶೋಕ್-ಸಿಎಂ ಜಟಾಪಟಿ:

ಸಿಎಂ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರ ಟೀಕೆಯನ್ನು ವ್ಯಂಗ್ಯವಾಡುತ್ತಾ, “ನಮ್ಮ ಜನ ಬಹಳ ಬುದ್ಧಿವಂತರು, ಅವರು ಮಾವಿನ ಹಣ್ಣನ್ನು ಮಾವಿನ ಹಣ್ಣು ಎಂದೇ ನೋಡ್ತಾರೆ. ಮಾವಿನ ಹಣ್ಣು ಬೇವಿನ ಹಣ್ಣಾಗಲು ಸಾಧ್ಯವಿಲ್ಲ” ಎಂದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಆರ್‌ ಅಶೋಕ್ (R Ashoka), “ನಾನು ಮಾವಿನ ಹಣ್ಣನ್ನು ಮಾವಿನ ಹಣ್ಣು ಅಂತಲೇ ಹೇಳಿದ್ದೆ, ಆದರೆ ಅದು ‘ಹುಳಿ’ ಅಷ್ಟೇ ಎಂದಿದ್ದೆ” ಎಂದು ತಿರುಗೇಟು ನೀಡಿದರು.

“ನಮ್ಮದು ತುಂಬಿದ ಕೊಡ” – ಚೊಂಬಿನ ರಾಜಕೀಯ:

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ‘ಖಾಲಿ ಚೊಂಬು’ ನೀಡಿದೆ ಎಂದು ಈ ಹಿಂದೆ ಸಿಎಂ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ರಾಜ್ಯ ಬಜೆಟ್ ದಿನ ‘ಖಾಲಿ ಚೊಂಬು’ ಪ್ರದರ್ಶಿಸಿ ಪ್ರತಿಭಟಿಸಿದ್ದರು. ಇಂದು ಉತ್ತರ ನೀಡಿದ ಸಿಎಂ, “ನಮ್ಮ ಬಜೆಟ್ ಖಾಲಿ ಚೊಂಬಲ್ಲ, ಇದೊಂದು ತುಂಬಿದ ಕೊಡ.” ಕೇಂದ್ರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಖಾಲಿ ಚೊಂಬು ಸಿಕ್ಕಿದೆ ಎಂದು ನಾನು ಹೇಳಿದ್ದು ಸತ್ಯ. ಅದಕ್ಕೆ ಪ್ರತಿಯಾಗಿ ನೀವು ಇಲ್ಲಿ ಪ್ರತಿಭಟನೆ ಮಾಡಿದ್ದು ಸರಿಯಲ್ಲ” ಎಂದು ಬಿಜೆಪಿಗೆ ಟಾಂಗ್ ನೀಡಿದರು.

ನಾನು ಇದುವರೆಗೆ 17 ಬಜೆಟ್ ಮಂಡಿಸಿದ್ದೇನೆ. ವಿರೋಧ ಪಕ್ಷದ ನಾಯಕರು ಕೇವಲ ಹೆಡ್‌ಲೈನ್ ಬರಲಿ ಎಂಬ ಉದ್ದೇಶದಿಂದ ಹೊಸ ಪದಪುಂಜಗಳನ್ನು ಬಳಸಿ ಟೀಕೆ ಮಾಡಿದ್ದಾರೆ. ಟೀಕೆ ಮಾಡಿದಾಕ್ಷಣ ಬಜೆಟ್‌ನ ಗಂಭೀರತೆ ಅಥವಾ ಅದರ ಉಪಯುಕ್ತತೆ ಹಾಳಾಗುವುದಿಲ್ಲ ಎಂದು ಹೇಳಿದರು.