ಹಾಸನ: ಅಕ್ರಮ ಭೂಮಿ ಮಂಜೂರಾತಿ ಪ್ರಕರಣಕ್ಕೆ (Illegal Land Regularisation Case) ಸಂಬಂಧಿಸಿದಂತೆ ಜೆಡಿಎಸ್‌ನ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ (K.S. Lingesh) ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಳೇಬೀಡಿನಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಿಐಡಿ ಅಧಿಕಾರಿಗಳ ತಂಡ, ಮಾಜಿ ಶಾಸಕರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದೆ. ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಭೂ ಹಗರಣದ ಆರೋಪ ಇವರ ಮೇಲಿದೆ.
ಕೆ.ಎಸ್. ಲಿಂಗೇಶ್ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಬೇಲೂರು ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು. ಶಾಸಕರಾಗಿದ್ದ ಅವಧಿಯಲ್ಲಿ ಅವರು ಸರ್ಕಾರದ ‘ಬಗರ್ ಹುಕುಂ’ ಸಮಿತಿಯ ಅಧ್ಯಕ್ಷರಾಗಿಯೂ ಜವಾಬ್ದಾರಿ ಹೊತ್ತಿದ್ದರು. ಈ ಅವಧಿಯಲ್ಲಿ ಅರ್ಹರಲ್ಲದವರಿಗೆ, ನಿಯಮ ಬಾಹಿರವಾಗಿ ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಮಂಜೂರಾತಿ ಮಾಡಿಕೊಟ್ಟಿದ್ದಾರೆ ಎಂಬ ಗಂಭೀರ ಆರೋಪ ಲಿಂಗೇಶ್ ವಿರುದ್ಧ ಕೇಳಿಬಂದಿತ್ತು.
ಈ ಬೃಹತ್ ಅಕ್ರಮ ಭೂ ಮಂಜೂರಾತಿ ಹಗರಣದ ಕುರಿತು ಕೋಲಾರ ಮೂಲದ ಪ್ರಸಿದ್ಧ ಆರ್‌ಟಿಐ ಕಾರ್ಯಕರ್ತ ರಮೇಶ್‌ಕುಮಾರ್ ಅವರು ದಾಖಲೆ ಸಮೇತ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿ, ಸರ್ಕಾರ ಇದರ ತನಿಖೆಯನ್ನು ಸಿಐಡಿಗೆ (CID) ವಹಿಸಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಸಿಐಡಿ ಪೊಲೀಸರು ಸುದೀರ್ಘ ತನಿಖೆ ನಡೆಸಿ, ಇದೀಗ ಮಾಜಿ ಶಾಸಕರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಗರಣದಲ್ಲಿ ಕೇವಲ ರಾಜಕಾರಣಿಗಳು ಮಾತ್ರವಲ್ಲದೆ ಅಂದಿನ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳೂ ಭಾಗಿಯಾಗಿದ್ದರು. ಪ್ರಕರಣದ ಆರೋಪಿಗಳಾಗಿದ್ದ ಅಂದಿನ ಉಪವಿಭಾಗಾಧಿಕಾರಿ (AC), ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಭೂಮಿ ಪಡೆದುಕೊಂಡಿದ್ದ ಫಲಾನುಭವಿಗಳು ಈಗಾಗಲೇ ನ್ಯಾಯಾಲಯದಿಂದ ಮುಂಜಾಗ್ರತಾ ಜಾಮೀನು (Bail) ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರಿಗೆ ಮಾತ್ರ ಕೋರ್ಟ್‌ನಲ್ಲಿ ಜಾಮೀನು ಸಿಕ್ಕಿರಲಿಲ್ಲ. ಜಾಮೀನು ಇಲ್ಲದ ಕಾರಣ ಸಿಐಡಿ ಪೊಲೀಸರು ಹಳೇಬೀಡಿನ ನಿವಾಸದಲ್ಲಿದ್ದ ಲಿಂಗೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ.
