ಬಳ್ಳಾರಿ: ನಗರದಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಮುಂಭಾಗ ನಡೆದ ಬ್ಯಾನರ್ ಗಲಾಟೆಯ ವಿವಾದ ಮಾಸುವ ಮುನ್ನವೇ, ರೆಡ್ಡಿ ಒಡೆತನದ ಆಸ್ತಿಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ನಡೆದಿದೆ. ನಗರದ ಬೆಳಗಲ್ಲು ರಸ್ತೆಯಲ್ಲಿರುವ ‘ಜಿ ಸ್ಕೈರ್ ಲೇ ಔಟ್’ನ ಅತ್ಯಾಧುನಿಕ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚುವ ಮೂಲಕ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ.
ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಒಡೆತನದಲ್ಲಿ ನಿರ್ಮಾಣವಾಗುತ್ತಿರುವ ಈ ಬೃಹತ್ ಲೇಔಟ್‌ನಲ್ಲಿ, ನಿವೇಶನ ಖರೀದಿದಾರರಿಗೆ ತೋರಿಸಲೆಂದು ವಿಶೇಷ ಮಾದರಿ ಮನೆಯನ್ನು ನಿರ್ಮಿಸಲಾಗಿತ್ತು. ಸುಮಾರು 100 ಎಕರೆ ವಿಸ್ತೀರ್ಣದ ಈ ಲೇಔಟ್‌ನಲ್ಲಿ ಸಂಜೆ 6:30ರ ಸುಮಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ವಾಸವಿಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಬೆಂಕಿ ಹಚ್ಚಿದವರನ್ನು ಹಿಡಿಯಲು ಸ್ಥಳೀಯರು ಪ್ರಯತ್ನಿಸಿದರೂ ಅವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಇದೊಂದು ರಾಜಕೀಯ ಪ್ರೇರಿತ ಕೃತ್ಯ ಎಂದು ನೇರವಾಗಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದಾರೆ. ಕಳೆದ ಜನವರಿ 1ರಂದು ನಡೆದ ಬ್ಯಾನರ್ ಗಲಾಟೆ ವೇಳೆ ವಿರೋಧಿಗಳು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದರು. ಅಂದು ಹೇಳಿದ ಮಾತನ್ನು ಇದೀಗ ಕೃತ್ಯದ ಮೂಲಕ ಸಾಬೀತುಪಡಿಸಿದ್ದಾರೆ. ಇದು ಕಾಂಗ್ರೆಸ್ಸಿಗರ ಕೆಲಸವೇ ಹೊರತು ಬೇರೇನಲ್ಲ, ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಸಂಶಯಾಸ್ಪದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಬ್ಯಾನರ್ ವಿವಾದದ ಬೆನ್ನಲ್ಲೇ ನಡೆದಿರುವ ಈ ಅಗ್ನಿ ಅನಾಹುತ ಬಳ್ಳಾರಿ ರಾಜಕೀಯ ವಲಯದಲ್ಲಿ ಮತ್ತೆ ಕಾವೇರಿಸಿದೆ.
