S Shorts

Politics in Police: ಅಧಿಕಾರ ವಹಿಸಿಕೊಳ್ಳಲು ಬಂದ IPS ಅಧಿಕಾರಿ ವಾಪಸ್!!

Politics in Police: ಅಧಿಕಾರ ವಹಿಸಿಕೊಳ್ಳಲು ಬಂದ IPS ಅಧಿಕಾರಿ ವಾಪಸ್!!
Author: statenews2025
Posted By: statenews2025
Updated: Jan 29, 2026 | 12:30 PM

ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯ ಪೊಲೀಸ್ ಇಲಾಖೆ ರಾಜಕೀಯ ಮೇಲಾಟಕ್ಕೆ ವೇದಿಕೆಯಾಗಿದೆಯೇ? ಇಂತಹದೊಂದು ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಲು ಬಂದಿದ್ದ ಐಪಿಎಸ್ ಅಧಿಕಾರಿಯೊಬ್ಬರು ಚಾರ್ಜ್ ತೆಗೆದುಕೊಳ್ಳದೆ ವಾಪಸ್ ತೆರಳಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಏನಿದು ಘಟನೆ?

ಜನವರಿ 1ರಂದು ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಅಳವಡಿಕೆ ಗಲಾಟೆ ಮತ್ತು ನಂತರದ ಹಿಂಸಾಚಾರ ಜಿಲ್ಲಾ ಪೊಲೀಸ್ ಇಲಾಖೆಯನ್ನು ಸಂಕಷ್ಟಕ್ಕೆ ತಳ್ಳಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರಾದ ಜಿ. ಜನಾರ್ದನ ರೆಡ್ಡಿ ಹಾಗೂ ಬಿ. ಶ್ರೀರಾಮುಲು ಅವರು ಸ್ಥಳೀಯ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಪ್ರಮುಖವಾಗಿ ನಗರ ಡಿವೈಎಸ್ಪಿ ಚಂದ್ರಕಾಂತ ನಂದಾ ರೆಡ್ಡಿ ಅವರು ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ವರ್ಗಾವಣೆ ಮತ್ತು ಹೈಡ್ರಾಮಾ

ಈ ಒತ್ತಡದ ಬೆನ್ನಲ್ಲೇ ಸರ್ಕಾರ ಜನವರಿ 27ರಂದು ಚಂದ್ರಕಾಂತ ನಂದಾ ರೆಡ್ಡಿ ಅವರಿಗೆ ಸ್ಥಳ ನಿಯೋಜನೆ ಮಾಡದೆ ವರ್ಗಾವಣೆಗೊಳಿಸಿತ್ತು.ಅವರ ಜಾಗಕ್ಕೆ ತುಮಕೂರಿನಲ್ಲಿ ಎಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 2023ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಯಶ್‌ ಕುಮಾರ್‌ ಶರ್ಮ ಅವರನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿತ್ತು.

ಆದರೆ, ಹೊಸದಾಗಿ ನೇಮಕಗೊಂಡ ಶರ್ಮಾ ಅವರು ಅಧಿಕಾರ ವಹಿಸಿಕೊಳ್ಳಲು ಬಳ್ಳಾರಿಗೆ ಆಗಮಿಸಿದರೂ, ಅವರಿಗೆ ಚಾರ್ಜ್ ವಹಿಸಿಕೊಡಲು ಬಳ್ಳಾರಿ ನಗರ ಪೊಲೀಸರು ಹಿಂದೇಟು ಹಾಕಿದ್ದಾರೆ. ವರ್ಗಾವಣೆ ಆದೇಶ ಬಂದ ಬೆನ್ನಲ್ಲೇ ತೆರೆಮರೆಯಲ್ಲಿ ರಾಜಕೀಯ ಸರ್ಕಸ್ ನಡೆದಿದ್ದು, ಬೆಂಗಳೂರಿನಿಂದ ಬಂದ ‘ಒಂದು ಕರೆ’ಯಿಂದಾಗಿ ಅಧಿಕಾರ ವಹಿಸಿಕೊಳ್ಳಲು ಬಂದಿದ್ದ ಯಶ್ ಕುಮಾರ್ ಶರ್ಮಾ ಅವರು ಕೊನೆಗೆ ಚಾರ್ಜ್ ತೆಗೆದುಕೊಳ್ಳದೆಯೇ ವಾಪಸ್ ಹೋಗಿದ್ದಾರೆ ಎನ್ನಲಾಗಿದೆ.

ಗೊಂದಲದ ಗೂಡಾದ ಇಲಾಖೆ

ಸದ್ಯದ ಪರಿಸ್ಥಿತಿಯಲ್ಲಿ ಡಿವೈಎಸ್ಪಿ ಹುದ್ದೆಗೆ ಸಂಬಂಧಿಸಿದಂತೆ ಭಾರೀ ಗೊಂದಲ ನಿರ್ಮಾಣವಾಗಿದೆ. ವರ್ಗಾವಣೆಗೊಂಡ ನಂದಾ ರೆಡ್ಡಿ ಅವರಿಗೆ ಹೊಸ ಸ್ಥಳ ಸಿಕ್ಕಿಲ್ಲ, ಇತ್ತ ಅಧಿಕಾರ ವಹಿಸಿಕೊಳ್ಳಬೇಕಿದ್ದ ಶರ್ಮಾ ಅವರು ವಾಪಸ್ಸಾಗಿದ್ದಾರೆ. ಸರ್ಕಾರದ ಆದೇಶವಿದ್ದರೂ ಒಬ್ಬ ಐಪಿಎಸ್ ಅಧಿಕಾರಿಗೆ ಅಧಿಕಾರ ಸ್ವೀಕರಿಸಲು ಸಾಧ್ಯವಾಗದಿರುವುದು ಇಲಾಖೆಯ ಮೇಲಿರುವ ರಾಜಕೀಯ ಪ್ರಭಾವಕ್ಕೆ ಸಾಕ್ಷಿಯಂತಿದೆ.