S Shorts

ಹೃದಯಗಳ ಭಾಷೆಗೆ ಕನೆಕ್ಷನ್: ಮೂಕ, ಕಿವುಡ ಜೋಡಿಯ ವಿವಾಹಕ್ಕೆ ಸಾಕ್ಷಿಯಾದ ಸಿರುಗುಪ್ಪ!

ಹೃದಯಗಳ ಭಾಷೆಗೆ ಕನೆಕ್ಷನ್: ಮೂಕ, ಕಿವುಡ ಜೋಡಿಯ ವಿವಾಹಕ್ಕೆ ಸಾಕ್ಷಿಯಾದ ಸಿರುಗುಪ್ಪ!
Author: Sagaradventure
Posted By: Sagaradventure
Updated: Feb 8, 2026 | 2:44 PM

ಬಳ್ಳಾರಿ: “ಪ್ರೀತಿಗೆ ಮಾತು ಬೇಕಿಲ್ಲ, ಕಿವಿಯೂ ಕೇಳಬೇಕಿಲ್ಲ, ಮನಸ್ಸು ಮನಸ್ಸುಗಳ ಮಿಲನವೇ ಸಾಕು,” ಎಂಬ ಮಾತಿಗೆ ಬಳ್ಳಾರಿಯ ಸಿರುಗುಪ್ಪದಲ್ಲಿ ಇಂದು (ಫೆಬ್ರವರಿ 8) ನಡೆದ ವಿಶೇಷ ವಿವಾಹವೊಂದು ಸಾಕ್ಷಿಯಾಯಿತು. ಅಪರೂಪದ ಮೂಗ ಮತ್ತು ಕಿವುಡ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಜೀವನದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

​ನಗರದ ಎ.ವಿ.ಎಸ್. ಕಲ್ಯಾಣ ಮಂಟಪದಲ್ಲಿ ನಡೆದ ಈ ಸುಂದರ ಸಮಾರಂಭದಲ್ಲಿ, ವರ ವೆಂಕಟ ಅಯ್ಯಪ್ಪ ಮತ್ತು ವಧು ಕೀರ್ತನಾ ಅವರು ಸಪ್ತಪದಿ ತುಳಿದು ಒಂದಾಗಿದ್ದಾರೆ. ಈ ಅಪರೂಪದ ಮದುವೆಗೆ ಸಹಸ್ರಾರು ಜನರು ಸಾಕ್ಷಿಯಾಗಿ, ನವಜೋಡಿಗೆ ಶುಭ ಹಾರೈಸಿದ್ದಾರೆ.

ವಧು-ವರರ ಹಿನ್ನೆಲೆ:

​ವರ: ಸಿರುಗುಪ್ಪ ನಿವಾಸಿ ಕೆ.ಎಚ್. ರಂಗನಾಥ ಶೆಟ್ಟಿ ಮತ್ತು ವಿಜಯಕಲಾ ದಂಪತಿಯ ಪುತ್ರ ವೆಂಕಟ ಅಯ್ಯಪ್ಪ.
​ವಧು: ಶಿವಮೊಗ್ಗ ಜಿಲ್ಲೆಯ ಡಿ.ಬಿ. ರವಿ ಮತ್ತು ಡಿ.ಆರ್. ಶಾಂತ ದಂಪತಿಯ ಪುತ್ರಿ ಕೀರ್ತನಾ.

​ಇವರಿಬ್ಬರಿಗೂ ಹುಟ್ಟಿನಿಂದಲೇ ಮಾತು ಬರುವುದಿಲ್ಲ ಮತ್ತು ಕಿವಿ ಕೇಳಿಸುವುದಿಲ್ಲ. ಆದರೆ, ಈ ದೈಹಿಕ ನ್ಯೂನತೆ ಅವರ ದಾಂಪತ್ಯ ಕನಸಿಗೆ ಅಡ್ಡಿಯಾಗಲಿಲ್ಲ. ಎರಡು ಕುಟುಂಬಗಳು ಪರಸ್ಪರ ಒಪ್ಪಿ, ಅದ್ದೂರಿಯಾಗಿ ಮದುವೆ ನೆರವೇರಿಸಿದ್ದಾರೆ.

ಸ್ನೇಹಿತರ ದಂಡು:

ವಿಶೇಷವೆಂದರೆ, ಈ ಮದುವೆಗೆ ಬೆಂಗಳೂರಿನಿಂದ ಹಿಡಿದು ಬೀದರ್‌ವರೆಗೆ ರಾಜ್ಯದ ನಾನಾ ಮೂಲೆಗಳಿಂದ 500ಕ್ಕೂ ಹೆಚ್ಚು ವಿಶೇಷ ಚೇತನ ಸ್ನೇಹಿತರು ಆಗಮಿಸಿದ್ದರು. ಸನ್ನೆ ಭಾಷೆಯಲ್ಲೇ ನವಜೋಡಿಗೆ ಶುಭಾಶಯ ಕೋರಿದ್ದು ನೋಡುಗರ ಕಣ್ಮನ ಸೆಳೆಯಿತು.

ತೃತೀಯ ಲಿಂಗಿಗಳ ಹಾರೈಕೆ:

ಮದುವೆಗೆ ಆಗಮಿಸಿದ್ದ ತೃತೀಯ ಲಿಂಗಿಗಳು ನವಜೋಡಿಗೆ ದೃಷ್ಟಿ ತೆಗೆದು, ಹೃದಯಸ್ಪರ್ಶಿ ಶುಭಾಶಯಗಳನ್ನು ಕೋರಿದರು. ಈ ಮೂಲಕ ಸಮಾಜದ ಎಲ್ಲಾ ವರ್ಗದ ಜನರು ಈ ವಿವಾಹದಲ್ಲಿ ಭಾಗಿಯಾಗಿ ನವಜೋಡಿಗೆ ಆಶೀರ್ವದಿಸಿದರು.