ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರ (DCC) ಬ್ಯಾಂಕ್ ಅಧ್ಯಕ್ಷ (President) ಮತ್ತು ಉಪಾಧ್ಯಕ್ಷರ (Vice President )ಚುನಾವಣೆ ರಾಜಕೀಯ ವಲಯದಲ್ಲಿ ಕುತೂಹಲದ ವಾತಾವರಣ ನಿರ್ಮಾಣವಾಗಿದೆ.
ಈ ನಡುವೆ ಸಿಎಂ ಆಪ್ತ ಶಾಸಕ ಅಶೋಕ ಪಟ್ಟಣ (MLA Ashok Pattan) ಡಿಸಿಸಿ ಬ್ಯಾಂಕ್‌ಗೆ ನಾಮನಿರ್ದೇಶಿತ ಸದಸ್ಯರಾಗಿ ಸೇರ್ಪಡೆಗೊಂಡಿದ್ದು, ಅವರ ವೈಲ್ಡ್ ಕಾರ್ಡ್ ಎಂಟ್ರಿ ರಾಜಕೀಯ ತಾಪಮಾನವನ್ನು ಮತ್ತಷ್ಟು ಏರಿಸಿದೆ.
ಸರ್ಕಾರ ಈ ಬಾರಿ ನಾಮನಿರ್ದೇಶಿತ ಸದಸ್ಯರಿಗೂ ಮತದಾನ ಹಕ್ಕು ನೀಡಿರುವುದು ಚುನಾವಣೆಯನ್ನು ಮತ್ತಷ್ಟು ಸ್ಪರ್ಧಾತ್ಮಕವಾಗಿಸಿದೆ. ಅಪೆಕ್ಸ್ ಬ್ಯಾಂಕ್‌ನಿಂದಲೂ ಒಬ್ಬ ಪ್ರತಿನಿಧಿ ನಾಮನಿರ್ದೇಶಿತ ಸದಸ್ಯನಾಗಿ ಆಯ್ಕೆಯಾಗಿದ್ದಾನೆ. ಇದರಿಂದ ಬ್ಯಾಂಕ್ ನಿರ್ದೇಶಕರ ಸಂಖ್ಯೆ ಈಗ 18ಕ್ಕೆ ಏರಿಕೆಯಾಗಿದೆ.
ಇದಲ್ಲದೆ 13 ಮಂದಿ ನಿರ್ದೇಶಕರು ಜಾರಕಿಹೊಳಿ ಬಣಕ್ಕೆ ಸೇರಿದವರು ಎಂದು ಮೂಲಗಳು ತಿಳಿಸಿವೆ. ಆದರೆ ಬಣದೊಳಗೆ ಕೆಲವು ಸಣ್ಣಪುಟ್ಟ ಅಸಮಾಧಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಿರ್ದೇಶಕರ ವಿಶ್ವಾಸ ಗಳಿಸಲು ಕದನ ಕಣ ಆರಂಭವಾಗಿದೆ.
ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲ ಎಲ್ಲೆಡೆ ಮೂಡಿದೆ. ಜಾರಕಿಹೊಳಿ (Jarkiholi) ಸಹೋದರರು ತಮ್ಮ ಅಭ್ಯರ್ಥಿಗಳ ಹೆಸರು ಮತ್ತು ತಂತ್ರವನ್ನು ಗುಟ್ಟಾಗಿಯೇ ಇಟ್ಟುಕೊಂಡಿದ್ದು, ಇನ್ನೊಂದೆಡೆ ವಿರೋಧಿ ಬಣದ ನಿರ್ದೇಶಕರನ್ನೂ ಸಂಪರ್ಕಿಸುವ ಯತ್ನಗಳು ಜೋರಾಗಿವೆ. ನಾಳೆಯ ಚುನಾವಣೆಯಿಂದ ಬೆಳಗಾವಿ ರಾಜಕೀಯದಲ್ಲಿ ಹೊಸ ತಿರುವು ಕಾಣಬಹುದು ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ.
