ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಮಾನವ ಮತ್ತು ವನ್ಯಜೀವಿಗಳ (ವಿಶೇಷವಾಗಿ ಕೋತಿಗಳ) ಸಂಘರ್ಷವನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಒಂದು ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ.
ಮಹಾರಾಷ್ಟ್ರದಲ್ಲಿ ಮಂಗಗಳು ವಿನಾಶಕಾರಿಯಾಗಿ ವರ್ತಿಸುತ್ತಿವೆ. ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಅವುಗಳ ಉಪಸ್ಥಿತಿಯು ತೀವ್ರವಾಗಿ ಹೆಚ್ಚಾಗಿದೆ. ರೈತರು ಬೆಳೆದ ಬೆಳೆಗಳನ್ನು ಹೊಲಗಳಲ್ಲಿ ನಾಶಪಡಿಸುತ್ತಿದ್ದು, ಅಪಾರ ನಷ್ಟವನ್ನುಂಟುಮಾಡುತ್ತಿವೆ. ಮನೆಗಳಿಗೆ ನುಗ್ಗಿ, ಆಸ್ತಿಪಾಸ್ತಿಗೆ ಹಾನಿ ಮಾಡುವುದರಿಂದ ಮತ್ತು ಕೆಲವೊಮ್ಮೆ ದಾಳಿ ಮಾಡುವುದರಿಂದ ಈ ಸಮಸ್ಯೆ ಜಟಿಲವಾಗಿದೆ. ಇದರಿಂದಾಗಿ ಸ್ಥಳೀಯರು ಹೊರಗೆ ಬರಲು ಹೆದರುತ್ತಿದ್ದಾರೆ. ಸಾರ್ವಜನಿಕರ ಬೇಡಿಕೆಗಳ ಮೇರೆಗೆ ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದ್ದಾರೆ.
ಮಂಗಗಳ ಬೆದರಿಕೆಯನ್ನು ಕಡಿಮೆ ಮಾಡಲು, ಅವುಗಳನ್ನು ಹಿಡಿದು ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಈ ಉದ್ದೇಶಕ್ಕಾಗಿ, ಮಂಗಗಳನ್ನು ಸೆರೆಹಿಡಿದವರಿಗೆ ನಗದು ಬಹುಮಾನವನ್ನು ಘೋಷಿಸಲಾಗಿದೆ.
ಜನವಸತಿ ಪ್ರದೇಶಗಳಿಗೆ ನುಗ್ಗಿ ಉಪಟಳ ನೀಡುವ ಕೋತಿಗಳನ್ನು ಸುರಕ್ಷಿತವಾಗಿ ಹಿಡಿದು ಬೇರೆಡೆಗೆ ಸ್ಥಳಾಂತರಿಸುವವರಿಗೆ ಪ್ರತಿ ಕೋತಿಗೆ 600 ರೂಪಾಯಿ ಸಂಭಾವನೆ ನೀಡುವುದಾಗಿ ಸರ್ಕಾರ ಘೋಷಿಸಿದೆ. ಈ ಮೊದಲು ಪ್ರತಿ ಕೋತಿಗೆ 300 ರೂಪಾಯಿ ನೀಡಲಾಗುತ್ತಿತ್ತು. ಈಗ ಇದನ್ನು 600 ರೂಪಾಯಿಗೆ ಏರಿಸಲಾಗಿದೆ. ಮುಖ್ಯವಾಗಿ ಕೆಂಪು ಮುಖದ ಕೋತಿಗಳು (Rhesus Macaques) ಮತ್ತು ಹನುಮಾನ್ ಲಂಗೂರ್‌ಗಳನ್ನು ಹಿಡಿಯುವ ಕಾರ್ಯಾಚರಣೆಗೆ ಈ ಯೋಜನೆ ಅನ್ವಯಿಸುತ್ತದೆ. ಕೋತಿಗಳನ್ನು ಹಿಡಿಯುವಾಗ ಅವುಗಳಿಗೆ ಯಾವುದೇ ಗಾಯವಾಗದಂತೆ ನೆಟ್ ಅಥವಾ ಪಂಜರಗಳನ್ನು ಮಾತ್ರ ಬಳಸಬೇಕು.
ಕಾರ್ಯಾಚರಣೆಯ ಪ್ರತಿ ಹಂತದಲ್ಲೂ ಫೋಟೋ ಅಥವಾ ವಿಡಿಯೋ ಸಾಕ್ಷ್ಯವನ್ನು ಒದಗಿಸಬೇಕು. ಹಿಡಿದ ಕೋತಿಗಳನ್ನು ಜನವಸತಿ ಪ್ರದೇಶದಿಂದ ಕನಿಷ್ಠ 10 ಕಿಲೋಮೀಟರ್ ದೂರದ ಅರಣ್ಯ ಪ್ರದೇಶಕ್ಕೆ ಬಿಡಬೇಕು.
ಅರಣ್ಯ ಪ್ರದೇಶದ ನಾಶ ಮತ್ತು ನಗರ ಪ್ರದೇಶಗಳಲ್ಲಿ ಆಹಾರ ಸುಲಭವಾಗಿ ಸಿಗುತ್ತಿರುವುದರಿಂದ ಕೋತಿಗಳು ನಗರಗಳಿಗೆ ನುಗ್ಗುತ್ತಿವೆ. ಇದರಿಂದ ಬೆಳೆ ಹಾನಿ ಮತ್ತು ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುತ್ತಿದೆ. ಮಾನವ ಸುರಕ್ಷತೆ ಮತ್ತು ಪ್ರಾಣಿ ಸಂರಕ್ಷಣೆ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
